ಹಲಗೇರಿ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಆಗಮನ, ಅಕ್ರಮ ದಂದೆಕೋರರಿಗೆ ರಸದೌತಣ.!!


ಮಂದಾರ ನ್ಯೂಸ್, ರಾಣೆಬೆನ್ನೂರು : ಅಕ್ರಮ ಚಟುವಟಿಕೆಗಳ ತವರೂರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು. ಅಕ್ರಮ ಚಟುವಟಿಕೆಗಳಿಂದ ಇಡೀ ರಾಜ್ಯದ ಗಮನ ಸೆಳೆದ ವಾಣಿಜ್ಯ ನಗರಿ ರಾಣೇಬೆನ್ನೂರು.

ರಾಣೆಬೆನ್ನೂರು ಅಕ್ರಮ ಚಟುವಟಿಕೆಗಳ ಮುಕ್ತ ನಗರ ವಾಗುವುದು ಕನಸಿನ ಮಾತು. ಈ ತಾಲೂಕಿನ ಪ್ರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮ ಚಟುವಟಿಕೆಗಳು ಅಧಿಕಾರಿಗಳ ಕೃಪಾಕಟಾಕ್ಷದಿಂದ ಯಾರ ಭಯವಿಲ್ಲದೆ ರಾಜಾರೋಷವಾಗಿ ಹಗಲು- ರಾತ್ರಿ ಎನ್ನದೆ ನಿರಂತರವಾಗಿ ನಡೆಯುತ್ತದೆ.

ಈ ತಾಲೂಕು ಪೋಲೀಸ್ ಇಲಾಖೆಯ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ ಇಡುವ ತಾಲೂಕು ಎಂದರು ತಪ್ಪಾಗಲಾರದು .ಕಾರಣ ಇಲ್ಲಿ ಅಕ್ರಮ ಚಟುವಟಿಕೆಗಳಿಂದ ಲಕ್ಷ ,ಲಕ್ಷ ಹಣವನ್ನು ತಮ್ಮ ಮನೆಯ ಖಜಾನೆ ತುಂಬಿಸಿಕೊಳ್ಳಲು ಅನುಕೂಲಕರವಾದ ವಾತಾವರಣ ಇಲ್ಲಿದೆ.

ಈ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳು ಪೈಪೋಟಿಗೆ ಬಿದ್ದವರಂತೆ ಲಕ್ಷ ,ಲಕ್ಷ ಹಣವನ್ನು ನೀಡಿ ಆಯಾ ಕಟ್ಟಿದ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ. ಅಷ್ಟರಮಟ್ಟಿಗೆ ಇಲ್ಲಿನ ನೆಲ ಅಧಿಕಾರಿಗಳ ಪಾಲಿಗೆ ವರವಾಗಿದೆ.
ರಾಣೆಬೆನ್ನೂರು ತಾಲೂಕಿನ ತುಂಗಭದ್ರ ನದಿಯ ದಡದ ಮೇಲೆ ಇರುವ ಹಲಗೇರಿ ಪೊಲೀಸ್ ಠಾಣೆಯ ಸರಹದ್ದು ಅಕ್ರಮ ಚಟುವಟಿಕೆಗಳಿಂದ ಪ್ರತಿ ಬಾರಿಯೂ ರಾಜ್ಯದ ಗಮನವನ್ನು ಸೆಳೆಯುತ್ತಿದೆ.

ಇಲ್ಲಿನ ಅಕ್ರಮ ದಂಧೆ ಕೋರರು ತುಂಗಭದ್ರಾ ನದಿಯ ಭೂಗರ್ಭವನ್ನು ಬಗೆದು ಅಕ್ರಮವಾಗಿ ಮರಳನ್ನು ತೆಗೆಯುತ್ತಿದ್ದಾರೆ. ಇದು ಅಧಿಕಾರಿಗಳ ಗಮನದಲ್ಲಿ ಇದೆ, ಅವರ ಕೃಪಾಕಟಾಕ್ಷದಿಂದಲೇ ಇಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿರುವುದು. 

ಹಲಗೇರಿ ಪೊಲೀಸ್ ಠಾಣೆಗೆ ಠಾಣಾಧಿಕಾರಿಗಳಾಗಿ ಬರುವಂತ ಅಧಿಕಾರಿಗಳು ಆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಕನಿಷ್ಠವೆಂದರೂ 25 ಲಕ್ಷ ನೀಡಿ ಬಂದಿರುತ್ತಾರೆ ಎಂಬ ಮಾಹಿತಿಯು ಇದೆ. ಒಂದು ಸಣ್ಣ ಪೊಲೀಸ್ ಠಾಣೆಗೆ ಎಷ್ಟು ದೊಡ್ಡ ಮಟ್ಟದ ಹಣವನ್ನು ನೀಡಿ ಆ ಕುರ್ಚಿ ಮೇಲೆ ಕುಳಿತುಕೊಳ್ಳಲು ಪೈಪೋಟಿ ನಡೆಸುತ್ತಾರೆ ಎಂದರೆ ಅದರ ಹಿನ್ನೆಲೆಯನ್ನು ನೀವೇ ಅರ್ಥೈಸಿಕೊಳ್ಳಿ.

ಆದಾಯದ ಮೂಲ ವಿಲ್ಲದೆ 25 ಲಕ್ಷ ದ ಹಣವನ್ನು ನೀಡಿ ಆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಅಧಿಕಾರಿಗಳೇನು ದಡ್ಡರೇ? 

ಒಬ್ಬ ಸಣ್ಣ ವ್ಯಾಪಾರಿಯೂ ತಾನು ಹಾಕುವ ಬಂಡವಾಳಕ್ಕೆ ಆದಾಯವನ್ನು ನಿರೀಕ್ಷೆ ಮಾಡುತ್ತಾನೆ. ಅಂತದರಲ್ಲಿ ಕಷ್ಟಪಟ್ಟು ಓದಿ, ಸರ್ಕಾರಿ ನೌಕರಿಯನ್ನು ಪಡೆದು, ಸರ್ಕಾರದ ಸಂಬಳಕ್ಕೆ ನಿಯತ್ತಾಗಿ ಕೆಲಸ ಮಾಡುವವರು ಇಷ್ಟು ದೊಡ್ಡಮಟ್ಟದ ಹಣವನ್ನು ನೀಡಿ ಈ ಠಾಣೆಯ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಏಕೆ ಪೈಪೋಟಿ ನಡೆಸುತ್ತಾರೆ? ತಾವು ಹಾಕಿದ ಬಂಡವಾಳಕ್ಕೆ ಆದಾಯವನ್ನು ನಿರೀಕ್ಷೆ ಮಾಡದಿದ್ದರೆ ಹೇಗೆ ಹೇಳಿ? 

ಒಬ್ಬ ಸಣ್ಣ ವ್ಯಾಪಾರಿಯೇ ಆದಾಯದ ನಿರೀಕ್ಷೆ ಮಾಡುವುದಾದರೆ, ದೊಡ್ಡ ಮೊತ್ತದ ಹಣವನ್ನು ನೀಡಿ ಬರುವ ಅಧಿಕಾರಿ ತಾವು ಹಾಕಿದ ಬಂಡವಾಳಕ್ಕೆ ಆದಾಯ ನಿರೀಕ್ಷೆ ಮಾಡದೆ ಇರಲು ಸಾಧ್ಯವೇ? ಹಾಗಾದರೆ ಅವರು ಹಾಕಿದ ಬಂಡವಾಳಕ್ಕೆ ಆದಾಯವನ್ನು ಅಕ್ರಮ ಚಟುವಟಿಕೆಗಳಿಂದಲೇ ಮಾಡಬೇಕು ಅಲ್ಲವೇ? ಅಕ್ರಮ ಚಟುವಟಿಕೆಗಳು ನಡೆದಾಗ ಮಾತ್ರ ಅವರು ಹಾಕಿದ ಬಂಡವಾಳಕ್ಕೆ ಆದಾಯ ಬರಲು ಸಾಧ್ಯ. ಹಾಗಾಗಿ ಇವರು ತಮ್ಮ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸಿಕೊಂಡು ಹೋಗಲು ದಂಧೆ ಕೋರರಿಗೆ ಅವಕಾಶ ಮಾಡಿಕೊಡುತ್ತಾರೆ. ಅವರು ನೀಡುವ ಎಂಜಲು ಕಾಸುಗಳೆ ಇವರ ಆದಾಯದ ಮೂಲಗಳಾಗುತ್ತವೆ.
ಹಲಗೇರಿ ಪೊಲೀಸ್ ಠಾಣಾ ಸರಹದ್ದಿನ ಕೋಟೆ ಹಾಳ್, ನಿಟ್ಟುವಳ್ಳಿ ,ಪತ್ತೆಪುರ, ಮುದ್ದೆನೂರು, ನಾಗೇನಹಳ್ಳಿ ಈ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ರಾಜಾರೋಷವಾಗಿ ನಡೆಯುತ್ತಿದೆ. ಇದು ಪೋಲಿಸ್ ಠಾಣಾಧಿಕಾರಿಗಳ ಗಮನದಲ್ಲೂ ಇದೆ .ಅದರಲ್ಲೂ ಪೊಲೀಸ್ ಎಸ್ ಪಿ ಕಾನ್ಸ್ಟೇಬಲ್ ಇವರ ಗಮನದಲ್ಲಿ ಇದ್ದೇ ಇರುತ್ತದೆ.

ಹಲಗೇರಿ ಪೊಲೀಸ್ ಠಾಣಾಧಿಕಾರಿಗಳು ನಿದ್ದೆಯಿಂದ ಎದ್ದು ನಿಮ್ಮ ಸರಹದ್ದಿನಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ. ಒಂದು ವೇಳೆ ಕೆಲಸದ ಒತ್ತಡದಲ್ಲಿ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ ನಮ್ಮ ಸುದ್ದಿ ವಾಹಿನಿಯಲ್ಲಿ ಪ್ರಕಟಿಸಿದ ಮಾಹಿತಿಯನ್ನೇ ಪಡೆದುಕೊಂಡು ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ. ಈ ಹಿಂದೆ ಕರ್ತವ್ಯ ನಿರ್ವಹಿಸಿದ ಪಿಎಸ್ಐ ಬಸವರಾಜ್ ಬಿರದಾರ್ ಅವರು ಸಾಧ್ಯವಾದಷ್ಟು ತಮ್ಮ ಕರ್ತವ್ಯದ ಅವಧಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನವನ್ನು ಮಾಡಿದ್ದರು. ಅದರಂತೆ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿದ್ದವು.

ತಾವು ನೂತನವಾಗಿ ಪೋಲಿಸ್ ಠಾಣೆಯ ಠಾಣಾಧಿಕಾರಿಗಳಾಗಿ ಬಂದು ಸರಿಸುಮಾರು ಎರಡು ತಿಂಗಳು ಕಳೆಯುತ್ತಿದೆ. ಅವಧಿಯಲ್ಲಿ ತಾವು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮಾಹಿತಿಯನ್ನು ಪಡೆದುಕೊಂಡಿರುತ್ತೀರಾ. ಅದರಂತೆ ಕೂಡಲೇ ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣವನ್ನು ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ. ಚುನಾವಣೆಯ ನೆಪವನ್ನು ಮುಂದಿಟ್ಟುಕೊಂಡು ಕೆಲಸದ ಒತ್ತಡದಲ್ಲಿ ಇದ್ದೇವೆ ಎಂದು ಉತ್ತರವನ್ನು ನೀಡುವ ಬುದ್ಧಿವಂತಿಕೆಯನ್ನು ತೋರಿಸಬೇಡಿ. ಅಕ್ರಮ ಚಟುವಟಿಕೆ ನಿಯಂತ್ರಿಸುವ ಜವಾಬ್ದಾರಿ ನಿಮ್ಮ ಇಲಾಖೆ ಮೇಲೆ ಹೆಚ್ಚಿದೆ. ಅಲ್ಲದೆ ಅಕ್ರಮ ಚಟುವಟಿಕೆಗಳು ನಡೆಸಿಕೊಂಡು ಹೋಗುವುದರ ಹಿಂದೆಯೂ ನಿಮ್ಮ ಇಲಾಖೆಯ ಪಾತ್ರ ಅಷ್ಟೇ ಇದೆ. ಆದ್ದರಿಂದ ನಾವು ನಿಮ್ಮ ಇಲಾಖೆಯ ಜವಾಬ್ದಾರಿಯನ್ನು ಬರಹದ ರೂಪದಲ್ಲಿ ಮಂಡಿಸಿದ್ದೇವೆ.

ಭೂ ಮತ್ತು ಗಣಿ ಇಲಾಖೆಯ ರಾಣೇಬೆನ್ನೂರು ವಿಭಾಗದ ಅಧಿಕಾರಿಗಳೇ ನಿಮ್ಮ ಕೆಲಸ ಕಲ್ಲು, ಮಣ್ಣು, ಮರಳು ತಡೆಗಟ್ಟುವುದು ಮತ್ತು ನಿಯಂತ್ರಿಸುವುದು ಇದು ಬಿಟ್ಟು ಬೇರೆ ಯಾವ ಕೆಲಸವು ನಿಮಗೆ ಇರುವುದಿಲ್ಲ. ಪೋಲಿಸ್ ಇಲಾಖೆಯವರಿಗೆ ಇರುವಷ್ಟು ಕೆಲಸ ನಿಮಗೇನು ಇರುವುದಿಲ್ಲ. ಅವರಂತೆ ಬಂದಬಸ್ತು ಒದಗಿಸುವುದು, ಚುನಾವಣೆಯ ಕರ್ತವ್ಯ ನಿರ್ವಹಿಸುವುದು, ರಾಜಕಾರಣಿಗಳಿಗೆ ಭದ್ರತೆ ನೀಡುವುದು ಹೀಗೆ ಅವರಿಗೆ ಹೆಚ್ಚಿನ ಒತ್ತಡದ ಕೆಲಸ ಇರುತ್ತದೆ. ಅದರ ನಡುವೆಯೂ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆದರೆ ನಿಮಗೇನು ಕೆಲಸ ಇರುತ್ತದೆ ಸ್ವಾಮಿ. ಸರ್ಕಾರ ನೀಡಿರುವ ಎಸಿ ಕಾರಿನಲ್ಲಿ ಪ್ರವಾಸ ಮಾಡಿಕೊಂಡು ಬರುವಂತೆ ಕೇವಲ ನದಿಯ ದಡದ ಮೇಲೆ ಕಣ್ಣಾಯಿಸುವುದಷ್ಟೇ ನಿಮ್ಮ ಕೆಲಸವೇ? ಎದ್ದೇಳಿ ಸ್ವಾಮಿ.! ಎದ್ದು. ನಿಮ್ಮ ಕರ್ತವ್ಯದ ಸರಹದ್ದಿನಲ್ಲಿ ಅಕ್ರಮ ಮರಳು, ಮಣ್ಣು ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಅದರಲ್ಲೂ ಕೋಟೆ ಹಾಳ್ ,ನಿಟ್ಪವಳ್ಳಿ, ಮುದ್ದೇನೂರು ನಾಗೇನಹಳ್ಳಿ ಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಸದ್ದಿಲ್ಲದೇ ಆರಂಭವಾಗಿದೆ. ಈಗಾಗಲೇ ತುಂಗಭದ್ರಾ ನದಿಯ ದಡದ ಮೇಲೆ ರಾಶಿ ,ರಾಶಿ ಮರಳಿನ ಗುಡ್ಡೆಗಳು ಕಾಣುತ್ತಿವೆ. ಇಂದು ಅಥವಾ ನಾಳೆ ಸಾಗಾಣಿಕೆಯಾಗುತ್ತದೆ. ಹೆಚ್ಚು ಕಮ್ಮಿ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 6:00 ಒಳಗೆ ನದಿಯ ದಡದ ಮೇಲೆ ಇರುವ ಮರಳು ಮಾಯವಾಗುವ ಸಾಧ್ಯತೆ ಇದೆ. ಅಷ್ಟರೊಳಗೆ ಎಚ್ಚೆತ್ತುಕೊಂಡು ತುಂಗಭದ್ರ ನದಿಯ ದಡದ ಮೇಲೆ ಇರುವ ಕೋಟೆ ಹಾಳ ಗ್ರಾಮದ ನದಿ ದಡದ ಮೇಲೆ ಇರುವ ಅಕ್ರಮ ಮರಳನ್ನು ಮುಟ್ಟುಗೊಳು ಹಾಕಿಕೊಳ್ಳಿ. ಇದು ನಿಮ್ಮ ಕರ್ತವ್ಯ ಎಂಬುದನ್ನು ಮರೆಯಬೇಡಿ. ನಿಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ಇರಲಿ, ಜನಸಾಮಾನ್ಯರ ತೆರಿಗೆ ಹಣವನ್ನು ಸಂಬಳದ ರೂಪದಲ್ಲಿ ಪಡೆಯುತ್ತಿರುವ ನಿಮಗೆ ಜನರ ಋಣ ತೀರಿಸುವ ಕೆಲಸ ನಿಮ್ಮದಾಗಲಿ. ಎಂಜಲು ಕಾಸಿಗೆ ಕೈಚಾಚಿ ಮುಂದೊಂದು ದಿನ ನಿಮ್ಮ ಕುಟುಂಬ ಸಂಕಷ್ಟ ಪಡುವಂತೆ ಮಾಡಿಕೊಳ್ಳಬೇಡಿ. ಯಾರು ಸಹ ಭೂ ತಾಯಿಯನ್ನ ಬಗೆದು ಮಾಡಿದ ಹಣದಲ್ಲಿ ಉದ್ಧಾರವಾದ ಉದಾಹರಣೆಗಳಿಲ್ಲ. ನಿಯತ್ತಾಗಿ ಕೆಲಸ ಮಾಡಿ ಪ್ರಾಮಾಣಿಕವಾಗಿ ಸಂಬಳ ಪಡೆಯಿರಿ. "ಸರ್ಕಾರದ ಕೆಲಸ ದೇವರ ಕೆಲಸ"ವೆಂದು ತಮ್ಮ ಕರ್ತವ್ಯದಲ್ಲಿ ನಿಷ್ಠೆ ತೋರಿ. ನದಿಯ ನೈಸರ್ಗಿಕ ಸೌಂದರ್ಯವನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಹೆಜ್ಜೆ ಪ್ರಾಮಾಣಿಕವಾಗಿರಲಿ. ಈಗಾಗಲೇ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿಕೊಂಡಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ನದಿಯ ಅಂತರ್ಜಲ ಮಟ್ಟ ಕುಸಿತವಾಗಿದೆ, ಜಲ-ಚರ ಪ್ರಾಣಿಗಳು  ಅಪಾಯದಲ್ಲಿದೆ. ತುಂಗಭದ್ರೆ ಮಲಿನಗೊಳ್ಳುತ್ತಿದ್ದಾಳೆ. ಅಕ್ರಮ ಮರಳು ಗಣಿಗಾರಿಕೆಯಿಂದ ನದಿ ತನ್ನ ಸೌಂದರ್ಯವನ್ನು ಕಳೆದುಕೊಂಡು ತಾಯಿ ನರಳುತ್ತಿದ್ದಾಳೆ. ನದಿಯ ನೈಸರ್ಗಿಕ ಸೌಂದರ್ಯಕ್ಕೆ ದಿನದಿಂದ ದಿನಕ್ಕೆ ಧಕ್ಕೆ ಬರುತ್ತಿದೆ. ತಮ್ಮ ಮಕ್ಕಳು ಸುಂದರವಾಗಿದ್ದರೆ ಸಾಲದು, ಪ್ರಕೃತಿ ಮಾತೆಯು ಸುಂದರವಾಗಿರಬೇಕು ಅಲ್ಲವೇ? ನೀವು ಗುರುಗಳಿಂದ ಕಲಿತ ಶಿಕ್ಷಣಕ್ಕೆ ಒಂದು ಅರ್ಥ ಬರಬೇಕಾದರೆ ನೀವು ಪಡೆದ ನೌಕರಿಯಲ್ಲಿ ಪ್ರಾಮಾಣಿಕತೆ ತೋರಿಸಿ .ಅದೇ ನೀವು ನಿಮ್ಮ ಗುರುಗಳಿಗೆ ನೀಡುವ ಗುರುದಕ್ಷಿಣೆಯಾಗುತ್ತದೆ.

ಕೂಡಲೇ ಹಲಗೇರಿ ಪೊಲೀಸ್ ಠಾಣಾಧಿಕಾರಿಗಳು ತಮ್ಮ ಸರಹದ್ದಿನ ಕೊಟೆಹಾಳ್,ನಿಟ್ಪಳ್ಳಿ, ಪತ್ತೆ ಪುರ, ಮುದ್ದೇನೂರು, ನಾಗೇನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಕಡಿವಾಣ ಹಾಕಿ.

ಮತ್ತಷ್ಟು ಸುದ್ದಿಯೊಂದಿಗೆ ಮುಂದಿನ ಬರಹದಲ್ಲಿ.......

Post a Comment

0 Comments