ಅಕ್ರಮ ಮಣ್ಣು ಸಾಗಾಣಿಕೆ ಲಾರಿಗೆ ಸಿಲುಕಿ ಇಬ್ಬರು ಯುವಕರ ಸಾವು.! ಇಲಾಖೆಯ ಅಧಿಕಾರಿಗಳಿಗೆ ಇನ್ನೆಷ್ಟು ಸಾವು ಬೇಕು.


ಮಂದಾರ ನ್ಯೂಸ್, ಹರಿಹರ : ಅಕ್ರಮಕ್ಕೆ ಕೊನೆ ಇಲ್ಲವೇ? ಅಕ್ರಮಕ್ಕೆ ಬಲಿಯಾಗುತ್ತಿರುವುದು ಬಡ ಹಾಗೂ ಮಾಧ್ಯಮ ವರ್ಗದ ಜನರು ಎಂಬ ಅರಿವಿಲ್ಲವೇ? ಅಧಿಕಾರಿಗಳ ಹಣದ ದಾಹಕ್ಕೆ ಇನ್ನೆಷ್ಟು ಬಲಿ ಬೇಕು? ಈ ಸಾವಿನ ಹೊಣೆಯನ್ನು ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹೊರಲೇಬೇಕು.

ಹರಿಹರ ತಾಲೂಕಿನಾದ್ಯಂತ ಅಕ್ರಮ ಮಣ್ಣು ಸಾಗಾಣಿಕೆ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಈ ಅಕ್ರಮ ಮಣ್ಣು ಸಾಗಾಣಿಕೆ ಲಾರಿಗಳಿಗೆ ಸಿಲುಕಿ ಪ್ರತಿ ವರ್ಷ ಸರಿ ಸುಮಾರು 10 ರಿಂದ 15 ಸಾವುಗಳಾಗುತ್ತಿವೆ. ಈ ಸಾವುಗಳೆಲ್ಲವೂ ಅಮಾಯಕ ಜೀವಗಳೆ ಆಗಿವೆ.

ನಿನ್ನೆ ಹರಿಹರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ,ಹನಗವಾಡಿ ಕ್ರಾಸ್ ಬಳಿ, ಉಡುಪಿ ಹೋಟೆಲ್ ಮುಂಬಾಗದಲ್ಲಿ ಅಕ್ರಮವಾಗಿ ಮಣ್ಣು ತುಂಬಿದ ಲಾರಿಯ ಗಾಲಿಗಳಿಗೆ ಸಿಲುಕಿ ಇಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿದೆ.

ಅತ್ಯಧಿಕ ಮಣ್ಣು ತುಂಬಿದ್ದ ಲಾರಿ ನಿಯಂತ್ರಣಕ್ಕೆ ಬಾರದ ಕಾರಣ ಟಿಪ್ಪರ್ ಲಾರಿಯ ಚಾಲಕ ಬೈಕಿಗೆ ಗುದ್ದಿದ್ದಾನೆ. ಹಿಂಬದಿಯಿಂದ ಟಿಪ್ಪರ್ ಲಾರಿ  ಬೈಕಿಗೆ ಗುದ್ದಿದ ಪರಿಣಾಮ ಯುವಕರು ಸ್ಥಳದಲ್ಲೇ ಮಣ್ಣು ತುಂಬಿದ ಟಿಪ್ಪರ್ ಲಾರಿಗೆ ಸಿಲುಕಿ ತಮ್ಮ ಪ್ರಾಣವನ್ನ ಬಿಟ್ಟಿದ್ದಾರೆ.

ಮೃತಪಟ್ಟ ಯುವಕರು ದಾವಣಗೆರೆ ತಾಲೂಕಿನ, ಹಳೆಬಾತಿ ಗ್ರಾಮದ, ಗುಡ್ಡದ ಕ್ಯಾಂಪಿನ ತಲಗಾರ್ ಮೇಸ್ತ್ರಿ ಆಕಾಶ್ (22) ಹಾಗೂ ರಾಕೇಶ್ (22) ಮೃತಪಟ್ಟ ದುರ್ದೈವಿಗಳು.

ಮೃತಪಟ್ಟ ಯುವಕರು ಕೆಲಸದ ನಿಮಿತ್ತ ಹರಿಹರ ತಾಲೂಕು ಹಳಸಬಾಳು ಗ್ರಾಮಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿ ಹೋದವರು ಕೊನೆಗೆ ಈ ಅಕ್ರಮ ಮಣ್ಣು ತುಂಬಿದ ಲಾರಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.
ಈ ಅಕ್ರಮ ಮಣ್ಣು ತುಂಬಿದ ಲಾರಿಗಳು ನಗರದ ಹೃದಯ ಭಾಗದಲ್ಲಿ ,ಅಧಿಕಾರಿಗಳ ಸಮ್ಮುಖದಲ್ಲೇ ಸಾಗುತ್ತಿವೆ. ಜನದಟ್ಟನೆ ಹಾಗೂ ವಾಹನ ಸಂಚಾರದ ಮಧ್ಯೆ ಈ ಅಕ್ರಮ ಮಣ್ಣು ತುಂಬಿದ ಲಾರಿಗಳು ಸಾಗುತ್ತಿರುವ ಪರಿಣಾಮ ಈ ಅಪಘಾತಗಳು ಸಂಭವಿಸುತ್ತಿವೆ.

ಟಿಪ್ಪರ್ ಲಾರಿಗೆ ಅಕ್ರಮವಾಗಿ ಅತ್ಯಧಿಕ ಲೋಡ್ ಮಣ್ಣನ್ನು ತುಂಬುತ್ತಿದ್ದು ,ಇವು ಜನದಟ್ಟನೆ ಮತ್ತು ವಾಹನ ಸಂಚಾರ ಮಧ್ಯೆ ಸಂಚರಿಸುತ್ತಿದ್ದು, ಅಧಿಕ ಮಣ್ಣು ತುಂಬಿದ ಲಾರಿಗಳಾಗಿರುವ ಕಾರಣ ಚಾಲಕನಿಗೆ ತತಕ್ಷಣ ಲಾರಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದಿಲ್ಲ ಕಾರಣ ಅತ್ಯಧಿಕವಾಗಿ ಮಣ್ಣು ತುಂಬಿರುತ್ತದೆ. ನಂತರ ಇಂತಹ ಅನಾಹುತಗಳಾಗುತ್ತವೆ.
ಭೂ ಮತ್ತು ಗಣಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಹಣದಾಹಕ್ಕೆ ಅಮಾಯಕ ಜೀವಿಗಳು ಬಲಿಯಾಗುತ್ತಿವೆ. ಯಾವುದೇ ತಪ್ಪನ್ನು ಮಾಡದ ಈ ಜೀವಗಳು ಬಲಿಯಾಗುವುದು ಎಷ್ಟರಮಟ್ಟಿಗೆ ಸರಿ?

ನಿನ್ನೆ ನಡೆದ ಘಟನೆಗೆ ಭೂ ಮತ್ತು ಗಣಿ ಇಲಾಖೆಯವರೇ ಜವಾಬ್ದಾರರು. ಇವರು ಅದು ಯಾವ ನಿಯಮಗಳ ಅಡಿ ಅತ್ಯಧಿಕವಾಗಿ ಅಕ್ರಮ ಮಣ್ಣನ್ನು ತುಂಬಿಕೊಂಡು ಹೋಗಲು ಅನುಮತಿ ನೀಡುತ್ತಿದ್ದಾರೋ ತಿಳಿಯದು. ಇವರು ಅನುಮತಿ ನೀಡಿದ ಕಾರಣ, ಅಕ್ರಮವಾಗಿ ಮಣ್ಣು ತುಂಬಿಕೊಂಡು ಹೋದ ಪರಿಣಾಮ ಈ ದುರ್ಘಟನೆಗಳು ನಡೆದಿದೆ. ಇದಕ್ಕೆ ನೇರ ಜವಾಬ್ದಾರರು ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆ.

ಪ್ರಜ್ಞಾವಂತ ನಾಗರಿಕರು ಎಚ್ಚೆತ್ತುಕೊಳ್ಳಬೇಕು. ಮುಂದೆ ಇಂಥ ಅನಾಹುತಗಳು ಆಗದಂತೆ ಹೋರಾಟ ನಡೆಸಬೇಕು. ಇಂದು ಆ ಯುವಕರು ನಾಳೆ ನಮ್ಮ ಅಕ್ಕ ಪಕ್ಕದ ಮನೆಯ ಯುವಕರು ಆಗಬಹುದು ಅಲ್ಲವೇ?

ನಿನ್ನೆ ಟಿಪ್ಪರ್ ಲಾರಿಗೆ ಸಿಲುಕಿ ಮೃತಪಟ್ಟ ಇಬ್ಬರು ಯುವಕರ ಸಾವಿನ ಜವಾಬ್ದಾರಿಯನ್ನು ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹೊತ್ತುಕೊಂಡು ನೊಂದ ಕುಟುಂಬದ ಪೋಷಕರಿಗೆ ಪರಿಹಾರ ನೀಡಬೇಕು ಎಂಬುದು ನಮ್ಮ ಮಾಧ್ಯಮದ ಆಶಯ. ಇದರ ಜೊತೆಗೆ ಅಕ್ರಮವಾಗಿ ಅಧಿಕ ಮಣ್ಣನ್ನು ತುಂಬಿಕೊಂಡು ಬಂದು ಅಪಘಾತಕ್ಕೆ ಕಾರಣವಾದ ಲಾರಿಯನ್ನು ಮುಟ್ಟುಗೋಳು ಹಾಕಿಕೊಂಡು ಚಾಲಕನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಕೇವಲ ನೆಪ ಮಾತ್ರಕ್ಕೆ ಚಾಲಕ ಪರಾರಿ ಲಾರಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಉತ್ತರ ನೀಡಬೇಡಿ.

ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಈ ಅಕ್ರಮ ಮಣ್ಣಿಗೆ ಅನುಮತಿಯನ್ನು ಯಾವ ಮಾನದಂಡದ ಮೇಲೆ ನೀಡುತ್ತಿದ್ದಾರೋ ತಿಳಿಯದು. ಇವರು ನೆಪ ಮಾತ್ರಕ್ಕೆ ಅಲ್ಲೊಂದು ಇಲ್ಲೊಂದು ದೂರನ್ನು ದಾಖಲಿಸಿಕೊಳ್ಳುತ್ತಾರೆ ದಂಡವನ್ನು ಕಟ್ಟಿಸಿಕೊಳ್ಳುತ್ತಾರೆ. ಆದರೆ ಅಕ್ರಮ ಮಣ್ಣು ಸಾಗಾಣಿಕೆ ಮಾತ್ರ ನಿಂತಿಲ್ಲ. ಹೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಈಗಾಗಲೇ ಹರಿಹರ ತಾಲೂಕಿನಲ್ಲಿ ಈ ಮಣ್ಣು ತುಂಬಿದ ಲಾರಿಗೆ ಸಿಲುಕಿ ಅನೇಕ ಅಮಾಯಕ ಜೀವಿಗಳು ತಮ್ಮ ಪ್ರಾಣವನ್ನ ಬಿಟ್ಟಿದ್ದಾರೆ. ಇದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೂ ಗೊತ್ತಿದೆ. ಆದರೆ ಇದಕ್ಕೆ ಕಡಿವಾಣವ ಹಾಕುವ ನಿಟ್ಟಿನಲ್ಲಿ ಮಾತ್ರ ತಮ್ಮ ಬದ್ಧತೆಯನ್ನು ತೋರುತ್ತಿಲ್ಲ. ಇದು ಏಕೆ? ಮಿಲಿಯನ್ ಡಾಲರ್ ಪ್ರಶ್ನೆ.

ಮಂದಾರ ನ್ಯೂಸ್
8880499904

Post a Comment

0 Comments