ಮಂದಾರ ನ್ಯೂಸ್, ಹರಿಹರ: ದಾವಣಗೆರೆ ಜಿಲ್ಲೆಯ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಅಮಾಯಕ ಜೀವಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ .ಅವರಿಗೆ ಬಡ ಹಾಗೂ ಮಧ್ಯಮ ವರ್ಗದ ಜನರ ಜೀವಗಳೇ ಬೇಕಾಗಿದೆ. ಇವರಿಗೆ ಸಾವಿನ ದಾಹ ನೀಗಿದಂತೆ ಕಾಣುತ್ತಿಲ್ಲ. ಇವರಿಗೆ ಇನ್ನೆಷ್ಟು ಅಮಾಯಕ ಜನರ ಜೀವಗಳು ಬೇಕು ನಾ ಕಾಣೆ......
ಇಲಾಖೆಯ ರೂಮಿನಲ್ಲಿ ಕುಳಿತುಕೊಳ್ಳುವ ,ದಪ್ಪ ಚರ್ಮದ ಮಂದ ಬುದ್ಧಿಯ ಅಧಿಕಾರಿಗಳಿಗೆ ಯಾವ ರೀತಿಯಲ್ಲಿ ಸುದ್ದಿ ಬರೆದರು ಸಾಗುವುದಿಲ್ಲ. ಛೆ ..ನಾಚಿಕೆ ಬಿಟ್ಟ ಅಧಿಕಾರಿಗಳು.
ಕಳೆದ ರಾತ್ರಿ ನದಿ ಹರಳಹಳ್ಳಿ- ಗುತ್ತೂರು ಗ್ರಾಮದ ಮಧ್ಯ ಹರಿಯುತ್ತಿರುವ ತುಂಗಭದ್ರ ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಎರಡು ಮುಗ್ಧ ಬಾಲಕರು ಸಾವನ್ನಪ್ಪಿದ ಮನಕಲಕುವ ಘಟನೆ ನಡೆದಿದೆ.
ನದಿ ಹರಳಹಳ್ಳಿ ಗ್ರಾಮದ ಬಸವರಾಜ್ (12) ಹಾಗೂ ನಾಗರಾಜ್ (10) ವರ್ಷದ ಬಾಲಕರಿಬ್ಬರು ತುಂಗಭದ್ರ ನದಿ ಮಧ್ಯದಲ್ಲಿ ಇರುವ ನೀರು ತುಂಬಿದ ಗುಂಡಿಯಲ್ಲಿ ಈಜು ಬಾರದೆ ಸಾವನ್ನಪ್ಪಿದ್ದಾರೆ. ಇವರು ನದಿ ಹರಳಹಳ್ಳಿ ಗ್ರಾಮದ ಮಂಜಪ್ಪ ಎಂಬುವರ ಮಕ್ಕಳು ಎಂದು ಗುರುತಿಸಲಾಗಿದೆ.
ಈ ಇಬ್ಬರು ಬಾಲಕರು ನಿನ್ನ ದಿನ ಸರಿಸುಮಾರು 12:00 ಘಂಟೆಯ ಸಮಯದಲ್ಲಿ ನದಿಯ ಕಡೆ ಹೋಗಿರುತ್ತಾರೆ. ನದಿಯಲ್ಲಿ ಈಜಾಡುವ ಉದ್ದೇಶದಿಂದ ನದಿಗೆ ಇಳಿದಿರುತ್ತಾರೆ .ಆದರೆ ನದಿಯ ಮಧ್ಯದಲ್ಲಿ ಇವರಿಗೆ ಅರಿವಿಲ್ಲದ ದೊಡ್ಡ, ದೊಡ್ಡ ಗಾತ್ರದ ಗುಂಡಿಗಳಿದ್ದು , ಆ ಗುಂಡಿಗಳೆಲ್ಲವೂ ನೀರಿನಿಂದ ತುಂಬಿರುವುದು ಮಕ್ಕಳ ಅರಿವಿಗೆ ಬಂದಿರುವುದಿಲ್ಲ. ನದಿಯಲ್ಲಿ ಈಜಾಡುತ್ತಾ ,ಈಜಾಡುತ್ತಾ ನದಿಯ ಮಧ್ಯದಲ್ಲಿರುವ ನೀರು ತುಂಬಿದ ಗುಂಡಿಯಲ್ಲಿ ಬಿದ್ದ ಪರಿಣಾಮ ಮಕ್ಕಳು ಈಜಾಡಿ ಮೇಲೆ ಬರಲು ಸಾಧ್ಯವಾಗದೆ ಅಲ್ಲೇ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಹಸಿರು ಸೇನೆ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷರಾದ ಮಾಕನೂರು ಹೀರಣ್ಣ ಅವರು ನಮ್ಮ ಮಾಧ್ಯಮದೊಂದಿಗೆ ಮಾಹಿತಿಯನ್ನು ಹಂಚಿಕೊಂಡರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಭೂ ಮತ್ತು ಗಣಿ ಇಲಾಖೆಯವರ ಬೇಜವಾಬ್ದಾರಿತನದಿಂದ ಈ ಸಾವುಗಳು ಸಂಭವಿಸಿದೆ. ಈ ಸಾವಿನ ನೇರ ಹೊಣೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಹೊತ್ತುಕೊಳ್ಳಬೇಕು. ಅವರ ನಿರ್ಲಕ್ಷವೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಕೂಡಲೆ ನೊಂದ ಕುಟುಂಬದವರಿಗೆ ಸರ್ಕಾರ ಪರಿಹಾರವನ್ನು ಒದಗಿಸಬೇಕು.ಹಾಗೂ ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟು, ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಯ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರುತ್ತಿಲ್ಲ ಎಂಬುದು ಈ ನದಿ ದಡದಲ್ಲಿ ಮೇಲೆ ಇರುವ ಗುಂಡಿಗಳೇ ಸಾಕ್ಷಿಯಾಗಿ ಹೇಳುತ್ತಿವೆ. ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿದ್ದರೆ ತುಂಗಭದ್ರಾ ನದಿಯ ನೈಸರ್ಗಿಕ ಸೌಂದರ್ಯ ಹಾಳಾಗುತ್ತಿರಲಿಲ್ಲ. ನದಿಯ ಮಧ್ಯ ಭಾಗದಲ್ಲಿ ಬೃಹತ್ ಗಾತ್ರದ ಗುಂಡಿಗಳು ಸೃಷ್ಟಿಯಾಗುತ್ತಿರಲಿಲ್ಲ. ಒಮ್ಮೆ ಇಲ್ಲಿ ಕಣ್ಣಾಯಿಸಿದರೆ ಬಳ್ಳಾರಿ ಗಣಿಗಾರಿಕೆಯನ್ನು ಮೀರಿಸುವಂತಿದೆ ಈ ಪ್ರದೇಶ. ಇದಕ್ಕೆಲ್ಲಾ ಕುಮ್ಮಕ್ಕು ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಎಂದು ನದಿ ಹರಳಹಳ್ಳಿ ಗ್ರಾಮದ ಶಿವಕುಮಾರ್ ಅವರು ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಮೇಲೆ ಗಂಭೀರವಾದ ಆರೋಪ ಮಾಡಿದರು.
ಕಳೆದ ಒಂದು ತಿಂಗಳಿಂದ ಈಚೆ ಭೂ ಮತ್ತು ಗಣಿ ಇಲಾಖೆಯ ಬೇಜವಾಬ್ದಾರಿತನದಿಂದ 5 ಸಾವುಗಳು ಸಂಭವಿಸಿದೆ. ಇವರಿಗೆ ಅಮಾಯಕ ಮುಗ್ಧ ಜನರ ಸಾವಿನ ದಾಹ ತೀರಿದಂತೆ ಕಾಣುತ್ತಿಲ್ಲ .ಇವರಿಗೆ ಇನ್ನೆಷ್ಟು ಬಲಿಗಳು ಬೇಕು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳೇ.! ಮುಗ್ಧ ಮಕ್ಕಳ ಸಾವಿನ ಹೊಣೆಯನ್ನು ಹೊತ್ತು ತಮ್ಮ ಕುರ್ಚಿಗೆ ಅಂಟಿಕೊಳ್ಳದೆ ಕರ್ತವ್ಯದಿಂದ ನಿರ್ಗಮಿಸಿ. ನಿಮ್ಮ ಕೈಯಲ್ಲಿ ಇಲಾಖೆಯನ್ನು ನೆಡೆಸುವ ನೈತಿಕತೆ ನಿಮಗಿಲ್ಲ. ಕೂಡಲೇ ಕರ್ತವ್ಯದಿಂದ ನಿರ್ಗಮಿಸಿ. ನಿಮ್ಮಿಂದ ಭೂತಾಯಿಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಭೂ ಮತ್ತು ನದಿಯ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಬರುತ್ತಿದೆ. ಅಮಾಯಕ ಜೀವಿಗಳು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿವೆ. ಕೂಡಲೇ ನೀವು ಈ ಸಾವಿನ ಜವಾಬ್ದಾರಿಯನ್ನು ಹೊತ್ತು ನೊಂದ ಕುಟುಂಬಗಳಿಗೆ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿ, ಇಲ್ಲದಿದ್ದರೆ ಕರ್ತವ್ಯದಿಂದ ನಿರ್ಗಮಿಸಿ ಎನ್ನುತ್ತಾರೆ ಸಾರ್ವಜನಿಕರು.
ಪ್ರತಿ ಬಾರಿಯೂ ಮಾಧ್ಯಮದವರು ಅಕ್ರಮ ಕಲ್ಲು, ಮಣ್ಣು, ಮರಳು ಗಣಿಗಾರಿಕೆಯಿಂದ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದಾರೆ .ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಅಮಾಯಕ ಜೀವಿಗಳನ್ನು ಬಲಿಪಡಿಸುತ್ತಿದ್ದಾರೆ. ನಿಜವಾಗಿಯೂ ಮಕ್ಕಳ ಸಾವಿನ ದೃಶ್ಯವನ್ನು ನೋಡಿದರೆ ಎಂತವರಿಗಾದರೂ ಕರುಳು ಚುರುಕ್ ಎನ್ನುತ್ತದೆ...
ಒಟ್ಟಾರೆಯಾಗಿ ನೆನ್ನೆ ರಾತ್ರಿ ನಡೆದ ಮುಗ್ಧ ಮಕ್ಕಳ ಸಾವಿಗೆ ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳೇ ನೇರ ಕಾರಣ. ಇವರಿಂದ ಅಮಾಯಕ ಜೀವಿಗಳು ಬಲಿಯಾಗುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ಅಕ್ರಮವಾಗಿ ಮಣ್ಣು ಸಾಗಾಣಿಕೆಯ ಲಾರಿಯ ಗಾಲಿಗೆ ಸಿಲುಕಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಗುತ್ತೂರು ತುಂಗಭದ್ರ ನದಿ ಒಡಲಿನಲ್ಲಿ ಮುಗ್ಧ ಮಕ್ಕಳ ಸಾವಾಗಿದೆ. ಮುಂದೆ ಯಾರ್ಯಾರಿಗೆ ಸಾವಿನ ಬಾಗಿಲು ತಟ್ಟುತ್ತಿದ್ಯೋ ತಿಳಿಯುತ್ತಿಲ್ಲ.
ದಾವಣಗೆರೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹರಿಹರ ತಾಲೂಕಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಇವರನ್ನು ವರ್ಗಾವಣೆ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ರಾಜ್ಯ ಸರ್ಕಾರ ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಹರಿಹರದ ತುಂಗಾಭದ್ರ ನದಿ ಹಾಗೂ ಇಲ್ಲಿನ ಭೂತಾಯಿಯ ಒಡಲನ್ನು ರಕ್ಷಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಸಾರ್ವಜನಿಕರೇ ನದಿಯ ಕಡೆ ಮಕ್ಕಳು ತೆರಳದಂತೆ ಎಚ್ಚರಿಕೆ ವಹಿಸಿ.ಅಕ್ರಮ ಮರಳು ಗಣಿಗಾರಿಕೆಯಿಂದ ನದಿಯ ಮಧ್ಯದಲ್ಲಿ ದೊಡ್ಡ, ದೊಡ್ಡ ಗಾತ್ರದ ಗುಂಡಿಗಳು ಸೃಷ್ಟಿಯಾಗಿದೆ. ಇದರಿಂದ ಹೆಚ್ಚಿನ ಸಾವುಗಳು ಸಂಭವಿಸುವ ಸಾಧ್ಯತೆ ಇದ್ದು ಯಾವುದಕ್ಕೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ನಮ್ಮ ಮಾಧ್ಯಮದ ಆಶಯವಾಗಿದೆ.
0 Comments