ಮಂದಾರ ನ್ಯೂಸ್, ಹರಿಹರ: ಕೊನೆಗೂ ಎಚ್ಚೆತ್ತುಕೊಂಡ ಕಂದಾಯ ಇಲಾಖೆ. ಅಕ್ರಮ ಮರಳು ಗಣಿಗಾರಿಕೆಯ ಪ್ರದೇಶದ ಮೇಲೆ ದಂಡಾಧಿಕಾರಿಗಳಿಂದ ದಾಳಿ. ಅಪಾರ ಪ್ರಮಾಣದ ಮರಳು ವಶಪಡಿಸಿಕೊಂಡ ಕಂದಾಯ ಇಲಾಖೆ.
ಹರಿಹರ ತಾಲೂಕಿನಾದ್ಯಂತ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ,ಇದಕ್ಕೆ ಸಂಬಂಧಿಸಿದಂತೆ ಪ್ರಜ್ಞಾವಂತ ನಾಗರಿಕರು ಅನೇಕ ರೀತಿಯಲ್ಲಿ ಹೋರಾಟವನ್ನು ಮಾಡುತ್ತಿದ್ದರು. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುವಂತೆ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಮನವಿಯನ್ನ ಸಲ್ಲಿಸುತ್ತಲೇ ಬಂದಿದ್ದರು.
ಈ ವಿಚಾರದಲ್ಲಿ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಲೇ ಬರುತ್ತಿದ್ದರು. ಅಕ್ರಮ ಕಲ್ಲು, ಮಣ್ಣು ,ಮರಳನ್ನು ತಡೆಯ ಬೇಕಾದ ಜವಾಬ್ದಾರಿ ಭೂ ಮತ್ತು ಗಣಿ ಇಲಾಖೆಯದ್ದು. ಆದರೆ ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರದ ಕಾರಣ , ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಾ ಬಂದಿರುವ ಪರಿಣಾಮ, ತಮ್ಮ ಮನೆಯ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದ್ದ ಗಣಿ ಇಲಾಖೆಯ ಅಧಿಕಾರಿಗಳಿಂದ ಆಗದೆ ಇರುವ ಕೆಲಸವನ್ನು ಹರಿಹರ ತಾಲೂಕು ದಂಡಾಧಿಕಾರಿಗಳು ಮಾಡಿ ತೋರಿಸಿದ್ದಾರೆ.
ನಿನ್ನೆ ತಡರಾತ್ರಿ ತಾಲೂಕಿನ ದೊಳೆಹೊಳೆ ಮತ್ತು ಇಂಗಳಗೊಂದಿ ಗ್ರಾಮದ ತುಂಗಭದ್ರ ನದಿಯ ಒಡಲಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ದಂಡಾಧಿಕಾರಿಗಳು ಅಕ್ರಮ ಗಣಿಗಾರಿಕೆ ಪ್ರದೇಶಗಳ ಮೇಲೆ ನಿನ್ನೆ ತಡರಾತ್ರಿ ದಾಳಿ ಮಾಡಿದ್ದಾರೆ.
ತಾಲೂಕು ದಂಡಾಧಿಕಾರಿಗಳಿಗೆ ಪ್ರಜ್ಞಾವಂತ ನಾಗರಿಕರು ಲಿಖಿತ ರೂಪದಲ್ಲಿ ದೂರನ್ನು ಸಲ್ಲಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹರಿಹರ ತಾಲೂಕು ದಂಡಾಧಿಕಾರಿಗಳಾದ ಗುರು ಬಸವರಾಜ್ ಅವರು ಅಕ್ರಮ ಮರಳುಗಳಿಗಾರಿಕೆ ಪ್ರದೇಶದ ಮೇಲೆ ದಾಳಿ ನಡೆಸಿದ್ದಾರೆ. ಖುದ್ದು ತಾವೇ ದಾಳಿ ನಡೆಸುವ ಮೂಲಕ ವಾಸ್ತವ ಅಂಶವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿದ್ದಾರೆ.
ಭೂ ಮತ್ತು ಗಣಿ ಇಲಾಖೆಯವರ ಉಪಸ್ಥಿತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಮಾನ್ಯ ತಾಲೂಕು ದಂಡಾಧಿಕಾರಿಗಳು ಚುನಾವಣೆ ಕರ್ತವ್ಯದ ನಡುವೆಯೂ ಇಂತಹ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿರುವುದು ಎಲ್ಲೋ ಒಂದು ಕಡೆ ನದಿ ಒಡಲಿನ ರಕ್ಷಣೆಯ ಆಶಾಭಾವನೆ ಮೂಡಿ ಬರುತ್ತಿದೆ.
ಭೂ ಮತ್ತು ಗಣಿ ಇಲಾಖೆಯವರು ಇನ್ನು ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ. ಇವರು ಇಲಾಖೆಯಲ್ಲಿ ಅದ್ಯಾವ ಘಣಂದಾರಿ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇವರ ಜವಾಬ್ದಾರಿ ಏನು ಎಂಬುದನ್ನು ಮರೆತಂತೆ ಕಾಣುತ್ತಿದೆ. ಇವರಿಗೆ ಬಡ ಹಾಗೂ ಮಧ್ಯಮ ವರ್ಗದ ಜನರ ಜೀವ ಮತ್ತು ಜೀವನ ಬೇಕಾಗಿದೆ. ಇವರು ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮುಗ್ಧ ಜನರ ಸಾವಿನ ದಾಹವನ್ನ ತೀರಿಸಿಕೊಳ್ಳಲು ಹೊರಟಿದ್ದಾರೆ. ಇವರಿಗೆ ಇನ್ನೂ ಸಾವಿನ ಹಸಿವು ನೀಗಿದಂತೆ ಕಾಣುತ್ತಿಲ್ಲ. ಸಂಪೂರ್ಣ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ. ಅದಕ್ಕಾಗಿ ಇವರು ಕುರ್ಚಿಯನ್ನು ಬಿಟ್ಟು ಎದ್ದು ಬರುತ್ತಿಲ್ಲ.
ಮಾನ್ಯ ಭೂ ಮತ್ತು ಗಣಿ ಇಲಾಖೆಯ ಸಚಿವರೆ. ಕೂಡಲೇ ದಾವಣಗೆರೆ ಜಿಲ್ಲಾ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳನ್ನು ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ವರ್ಗಾವಣೆ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇಂಥ ಬೇಜವಾಬ್ದಾರಿ ,ನಿರ್ಲಕ್ಷ ಅಧಿಕಾರಿಗಳ ಅವಶ್ಯಕತೆ ನಮ್ಮ ಜಿಲ್ಲೆಗೆ ಇಲ್ಲ ಎಂದು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ದಾವಣಗೆರೆ ಇಲಾಖೆಯ ಕುರ್ಚಿಯ ಮೇಲೆ ಕುಳಿತ ದಿನದಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಸಾವಿನ ಲೆಕ್ಕವನ್ನು ಹಾಕುವಂತ ಪರಿಸ್ಥಿತಿ ಬಂದಿದೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಕನಿಷ್ಠ ಎಂದರು ಎರಡರಿಂದ ಮೂರು ಅಕ್ರಮ ಮರಳು, ಮಣ್ಣು, ಗಣಿಗಾರಿಕೆಯಿಂದ ಮುಗ್ಧ ಜೀವಿಗಳು ಬಲಿಯಾಗುತ್ತಿವೆ. ಇಂತಹ ಸಾವುಗಳಿಗೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳೇ ನೇರ ಕಾರಣರಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಮಾತ್ರ ಮೀನಾಮೇಷ ಎಣಿಸುತ್ತಿದ್ದಾರೆ.
ತಾಲೂಕು ದಂಡಾಧಿಕಾರಿಗಳ ನಿನ್ನೆ ತಡ ರಾತ್ರಿಯ ದಾಳಿಯಿಂದ ಅಕ್ರಮ ಮಣ್ಣು ಗಣಿಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಭಯ ಹುಟ್ಟಿದ್ದಂತು ಸತ್ಯ.
ಜೀವದ ಹಂಗನ್ನು ತೊರೆದು ತಡರಾತ್ರಿ ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಕಾಲಿಟ್ಟ ಹರಿಹರ ತಾಲೂಕು ದಂಡಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
0 Comments