ಮಂದಾರ ನ್ಯೂಸ್,ಸಾಗರ: ಪೋಲಿಸ್ ಠಾಣೆಗಳು ಜನಸ್ನೇಹಿ ಠಾಣೆಗಳಾಗಿ ಕರ್ತವ್ಯವನ್ನ ನಿರ್ವಹಿಸಬೇಕು. ನೊಂದವರಿಗೆ ನೆರವಾಗಬೇಕು. ಆದರೆ ಇತ್ತೀಚಿನ ದಿನದಲ್ಲಿ ಪೊಲೀಸ್ ಠಾಣೆಗಳು ಭ್ರಷ್ಟಾಚಾರದ ವ್ಯವಹಾರಗಳನ್ನು ನಡೆಸುವ ಕೇಂದ್ರಗಳಾಗಿವೆ. ಹಣ ಉಳ್ಳವರ ಹಾಗೂ ರಾಜಕೀಯ ಹಿತಾಸಕ್ತಿ ಹೊಂದಿದವರ ಕೈಗೊಂಬೆಗಳಾಗಿ ಠಾಣೆಗಳು ಕರ್ತವ್ಯ ನಿರ್ವಹಿಸುತ್ತಿವೆ. ಮಾಫಿಯಗಳನ್ನು, ಸಮಾಜಘಾತಕ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನುಮತಿ ನೀಡುವ ಪವಿತ್ರ ಕಚೇರಿಗಳಾಗಿವೆಯೇ ? ಹೀಗೊಂದು ಅನುಮಾನ ಸಾರ್ವಜನಿಕರಿಗೆ ಕಾಡುತ್ತಿದೆ.
ಸಾಗರ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಸುಸಂಸ್ಕೃತರಿಂದ ತುಂಬಿರುವ ನಗರ. ಆದರೆ ಇತ್ತೀಚಿನ ದಿನದಲ್ಲಿ ತಾಲೂಕಿನಲ್ಲಿ ನಡೆಯುತ್ತಿರುವ ಕೆಲವು ಅಪರಾಧ ಚಟುವಟಿಕೆಗಳಿಂದ ತಾಲೂಕು ತನ್ನ ಗತವೈಭವವನ್ನ ಕಳೆದುಕೊಳ್ಳುತ್ತಿದೆ. ನಾಗರಿಕ ಸಮಾಜದ ಮುಂದೆ ತನ್ನ ಹೆಸರಿಗೆ ಕಳಂಕ ತಂದುಕೊಳ್ಳುತ್ತಿದೆ.
ಈ ಹಿಂದೆ ಸಾಗರ ತಾಲೂಕು ಸರಹದ್ದಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ, ಪ್ರಭಾವಿ ವ್ಯಕ್ತಿಗಳ ಎಂಜಲು ಕಾಸಿಗೆ ಕೈ ಚಾಚದೆ, ಜನಸಾಮಾನ್ಯರಿಗೆ ಸರ್ಕಾರದ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ತೋರುತ್ತಿದ್ದರು. ಜನಸ್ನೇಹಿ ಅಧಿಕಾರಿಗಳಾಗಿ ತಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿದ್ದರು.
ಆದರೆ ಇತ್ತೀಚಿಗೆ ತಾಲೂಕಿಗೆ ವರ್ಗಾವಣೆಯಾಗಿ ಬಂದಿರುವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತು ರಾಜಕೀಯ ವ್ಯಕ್ತಿಗಳೊಂದಿಗೆ ಕೈಜೋಡಿಸಿ. ಅವರ ತಾಳಕ್ಕೆ ಕುಣಿಯುತ್ತಾ ತಾಲೂಕಿನ ನೆಮ್ಮದಿಗೆ ಭಂಗ ತರುವಂತಹ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ತಾಲೂಕಿನ ಜನರ ಹಕ್ಕುಗಳನ್ನ ಕಸಿದುಕೊಳ್ಳುತ್ತಿದ್ದಾರೆ.
ಜನರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದರೆ ಅವರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ನೊಂದವರಿಗೆ ನೆರವು ಕೇವಲ ಕನಸಿನ ಮಾತಾಗಿದೆ. ಹೌದು ಈ ಮೇಲಿನ ವಿಚಾರಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನವನ್ನು ಏಕೆ ಮಾಡುತ್ತಿದ್ದೇನೆ ಎಂಬ ವಿಚಾರ ನಿಮ್ಮ ತಲೆಗೆ ಬಂದಿರಬಹುದು ಅಲ್ಲವೇ?
ಪ್ರಿಯ ಓದುಗರ ಮಿತ್ರರೇ.! ಕಳೆದ ಎರಡು ದಿನಗಳ ಹಿಂದೆ ಸಾಗರ ತಾಲೂಕು ಆನಂದಪುರ ಪೊಲೀಸ್ ಠಾಣೆಯಲ್ಲಿ ತ್ಯಾಗರ್ತಿ ಗ್ರಾಮದ ಯುವಕರ ಮೇಲೆ ಪೋಲಿಸ್ ಠಾಣಾಧಿಕಾರಿಗಳು ಯಾವುದೇ ವಿಚಾರಣೆಯನ್ನು ನಡೆಸದೆ ಮನ ಬಂದಂತೆ ಯುವಕರನ್ನು ಥಳಿಸಿರು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಪೋಲಿಸ್ ಠಾಣೆಯಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತಿವೆ ಎಂಬ ಆರೋಪಗಳು ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ.
ತ್ಯಾಗರ್ತಿ ಗ್ರಾಮದ ಯುವಕರಾದ ದಾನಪ್ಪ, ಕಾಂತೇಶ್, ನಾಗರಾಜ್ ಎಂಬ ಯುವಕರು ಬೆಳ್ಳಂದೂರು ಗ್ರಾಮದಲ್ಲಿ ನಡೆದ ಶುಭ ಸಮಾರಂಭಕ್ಕೆ ಹೋಗಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಬರುವ ಸಂದರ್ಭದಲ್ಲಿ ರಸ್ತೆ ಮಧ್ಯೆ ನಿಂತಿರುವ ಲಾರಿಯ ಚಾಲಕನನ್ನು ಮಾತನಾಡಿಸಿದ್ದಾರೆ. ಲಾರಿಯನ್ನು ರಸ್ತೆಯಿಂದ ಸ್ವಲ್ಪ ಸೈಡಿಗೆ ನಿಲ್ಲಿಸಿದ್ದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಆದರೆ ಲಾರಿಯ ಚಾಲಕ ಮತ್ತು ಅವರ ಮೂರು ಜನ ಸ್ನೇಹಿತರು ಏಕಾಏಕಿಯಾಗಿ ಸಲಹೆ ನೀಡಿದ ಯುವಕರ ಮೇಲೆ ಕಾದಾಟಕ್ಕೆ ಬಿದ್ದಿದ್ದಾರೆ. ಮಾತಿನ ಚಕಮುಕಿಯೊಂದಿಗೆ ಗಲಾಟೆ ನಡೆದಿದೆ.
ಲಾರಿಯ ಚಾಲಕ ಆನಂದಪುರ ಪೋಲಿಸ್ ಠಾಣೆಗೆ ಮಾಹಿತಿಯನ್ನು ನೀಡಿ ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕಿದ್ದಾನೆ. ಚಾಲಕನಿಂದ ಮಾಹಿತಿ ಪಡೆದ ಆನಂದಪುರ ಪೊಲೀಸ್ ಠಾಣಾಧಿಕಾರಿಗಳು ತ್ಯಾಗರ್ತಿ ಗ್ರಾಮದ ಯುವಕರನ್ನು ಠಾಣೆಗೆ ಬರುವಂತೆ ಫೋನ್ ಕರೆ ಮಾಡಿ ತಿಳಿಸಿರುತ್ತಾರೆ. ಪೋಲಿಸ್ ಇಲಾಖೆಯವರ ಫೋನ್ ಕರೆಯನ್ನು ಸ್ವೀಕರಿಸಿ ಅರ್ಧ ತಾಸಿನಲ್ಲಿ ಯುವಕರು ಠಾಣೆಗೆ ತೆರಳುತ್ತಾರೆ. ಠಾಣೆಗೆ ಯುವಕರನ್ನು ಕರೆಸಿಕೊಂಡ ಪೋಲಿಸ್ ಠಾಣಾಧಿಕಾರಿಗಳು ಯಾವುದೇ ವಿಚಾರಣೆಯನ್ನು ನಡೆಸದೇ, ಯುವಕರಿಗೆ ಮಾತನಾಡಲು ಅವಕಾಶ ನೀಡದೆ. ಮರಳು ಮಾಫಿಯದವರ ಒತ್ತಡಕ್ಕೆ ಮಣಿದು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಯುವಕರ ಮೇಲೆ ಮನಬಂದಂತೆ ಥಳಿಸಿದ್ದಾರೆ. ಪೋಲಿಸ್ ಠಾಣಾಧಿಕಾರಿಗಳು ತಮಗೆ ಸಾಕಾಗುವ ತನಕ ಥಳಿಸಿದ ನಂತರ ಅವರ ಎಸ್ ಪಿ ಕಾನ್ಸ್ಟೇಬಲ್ ಸಂತೋಷ್ ಇವರು ಲೆಕ್ಕ ಮಾಡಿಕೊಳ್ಳಲು ಹೇಳಿ ತಮ್ಮ ಮನಸ್ಸು ಇಚ್ಛೆ ಯುವಕರ ಮೇಲೆ ಮನಬಂದಂತೆ ಥಳಿಸಿದ್ದಾರೆ. ನಂತರ ಯುವಕರು ಪೋಲೀಸರ ಏಟುಗಳನ್ನು ತಡೆದುಕೊಳ್ಳಲು ಆಗದೆ ನೆಲಕ್ಕೆ ಬಿದ್ದು ಹೊರಳಾಡಿದ್ದಾರೆ. ನೆಲಕ್ಕೆ ಬಿದ್ದು ಹೊರಳಾಡುತ್ತಿದ್ದ ಯುವಕರನ್ನು ಗಮನಿಸಿದ ಠಾಣಾಧಿಕಾರಿಗಳು ಇವರಿಂದ ನೂರು ರೂಪಾಯಿ ದಂಡವನ್ನು ಕಟ್ಟಿಸಿಕೊಂಡು ಕಳುಹಿಸಿದ್ದಾರೆ.
ಯಾವುದೇ ತಪ್ಪನ್ನು ಮಾಡದ ಪೊಲೀಸರಿಂದ ಏಟು ತಿಂದ ಯುವಕರು ಕೂಡಲೇ ಸಾಗರ ತಾಲೂಕು ಉಪ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಪಡೆದಿದ್ದಾರೆ ಪೊಲೀಸ್ ಅವರಿಂದ ಥಳಿಸಿಕೊಂಡ ಮಾಹಿತಿಯನ್ನು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಯುವಕರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯಧಿಕಾರಿಗಳು ಕೂಡಲೇ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ಈ ಎಲ್ಲಾ ಘಟನೆಗಳು ಸರಿಸುಮಾರು ರಾತ್ರಿ ಹತ್ತು ಗಂಟೆಯಿಂದ ತಡರಾತ್ರಿ ಒಂದು ಗಂಟೆವರೆಗೆ ನಡೆದಿರುತ್ತದೆ.
ನಿನ್ನೆ ಸರಿ ಸುಮಾರು 10 ಗಂಟೆಗೆ ಮಾಹಿತಿ ಪಡೆದ ಪೋಲಿಸ್ ಇಲಾಖೆಯವರು ಘಟನೆಯ ಹಿಂದಿನ ಮಾಹಿತಿಯನ್ನು ಪಡೆಯಲು ಆಸ್ಪತ್ರೆಗೆ ತೆರಳಿದ್ದಾರೆ. ಯುವಕರು ಪೋಲಿಸ್ ಠಾಣಾಧಿಕಾರಿಗಳು ನಮ್ಮೊಂದಿಗೆ ನಡೆದುಕೊಂಡ ರೀತಿ ಸಂಬಂಧಿಸಿದಂತೆ ವಿಚಾರವನ್ನು ಎಳೆ -ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆದರೆ ಅಲ್ಲಿಗೆ ಬಂದಿದ್ದ ಪೊಲೀಸ್ ಕಾನ್ಸ್ಟೇಬಲ್ ಪರಶುರಾಮ ಇವರು ಯುವಕರ ಮಾಹಿತಿಯನ್ನು ಲಿಖಿತ ರೂಪದಲ್ಲಿ ಬರೆದುಕೊಳ್ಳದೆ ತಮ್ಮ ಇಲಾಖೆಯ ಮೇಲಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದಾರೆ.
ಆನಂದಪುರ ಪೊಲೀಸ್ ಠಾಣಾಧಿಕಾರಿಗಳು ತಮ್ಮ ಇಲಾಖೆಯ ಮೇಲಧಿಕಾರಿಗಳ ಮೂಲಕ ಹಾಗೂ ರಾಜಕೀಯ ವ್ಯಕ್ತಿಗಳ ಮೂಲಕ ಇವರ ಮೇಲೆ ಒತ್ತಡ ಹಾಕಲು ಪ್ರಾರಂಭಿಸಿದ್ದಾರೆ. ಪೊಲೀಸ್ ಇಲಾಖೆಯವರ ವಿರುದ್ಧ ನೀಡುತ್ತಿರುವ ದೂರನ್ನು ಹಿಂದಕ್ಕೆ ಪಡೆಯಿರಿ. ನಿಮಗೆ ಬೇಕಾದ ಚಿಕಿತ್ಸೆಯನ್ನು ನಾವು ಕೊಡಿಸುತ್ತೇವೆ. ಕೂಡಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎಂದು ಯುವಕರಿಗೆ ಒತ್ತಡ ಹಾಕಿದ್ದಾರೆ. ಯುವಕರ ಪೋಷಕರು ಪೊಲೀಸರ ಒತ್ತಡಕ್ಕೆ ಮಣಿಯದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಪೊಲೀಸರ ಒತ್ತಡಕ್ಕೆ ಪೋಷಕರು ಮಣಿಯದಿದ್ದಾಗ ಅದೇ ಪೊಲೀಸ್ ಇಲಾಖೆಯವರು ಇವರ ಮೇಲೆ ಬೇರೆ ರೀತಿಯ ಒತ್ತಡವನ್ನು ಹಾಕಲಾರಂಬಿಸಿದರು. ನೀವು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಸಂಧಾನಕ್ಕೆ ಬಾರದಿದ್ದರೆ ಮುಂದೆ ನೀವು ತುಂಬಾ ತೊಂದರೆಯನ್ನು ಅನುಭವಿಸುತ್ತೀರಾ. ನಿಮ್ಮನ್ನು ನಾವು ಸಂಜೆ ಒಳಗೆ ಎತ್ತಿ ಹಾಕಿಕೊಂಡು ಹೋಗುತ್ತೇವೆ. ಮುಂದೆ ನಾಗರಿಕ ಸಮಾಜದಲ್ಲಿ ಬದುಕುವುದು ಕಷ್ಟವಾಗಬಹುದು. ಎಂಬ ರೀತಿಯಲ್ಲಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿಯು ಪೋಷಕರ ಕಡೆಯಿಂದ ನಮ್ಮ ಮಾಧ್ಯಮಕ್ಕೆ ಬಂದಿರುತ್ತದೆ.
ಈ ಎಲ್ಲಾ ಬೆಳವಣಿಗೆಗಳು ನಡೆದ ಮೇಲು ಪೊಲೀಸ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇದುವರೆಗೂ ಸಂಬಂಧಿಸಿದ ತಮ್ಮ ಇಲಾಖೆಯ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿಯನ್ನ ಪಡೆದುಕೊಂಡಿರುವುದಿಲ್ಲ. ಅಲ್ಲದೆ ಯುವಕರ ಮೇಲೆ ಪೊಲೀಸರು ಹಲ್ಲೆ ನಡೆಸಲು ನೈಜ್ಯ ಕಾರಣ ಏನು ಎಂಬ ವಿಚಾರ ತಿಳಿದುಕೊಂಡಿರುವುದಿಲ್ಲ. ಯುವಕರು ಮತ್ತು ಮತ್ತೊಂದು ಗುಂಪಿನ ಯುವಕರ ಮಧ್ಯೆ ಗಲಾಟೆ ನಡೆದಿದ್ದರೂ ಅದು ಪೋಲಿಸ್ ಠಾಣೆಯಲ್ಲಿ ಇಬ್ಬರ ಮುಖಾ-ಮುಖಿಯಲ್ಲಿ ವಿಚಾರಣೆಯಾಗಬೇಕಿತ್ತು. ಅದಕ್ಕೂ ಮೊದಲು ಒಂದು ಗುಂಪಿನ ಯುವಕರು ಲಿಖಿತವಾಗಿ ದೂರನ್ನು ನೀಡಬೇಕಾಗಿತ್ತು. ಪೋಲಿಸ್ ಠಾಣೆಗೆ ಬಂದ ಯುವಕರಿಗೆ ಮಾತನಾಡಲು ಅವಕಾಶ ನೀಡಬೇಕಾಗಿತ್ತು. ಒಂದು ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ನಿಜವಾಗಿದ್ದರೆ ಕಾನೂನು ರೀತಿಯಲ್ಲಿ ಎಫ್ಐಆರ್ ದಾಖಲಿಸಿ ಕೋರ್ಟಿಗೆ ಕಳಿಸಬೇಕಿತ್ತು. ಆದರೆ ಆನಂದಪುರ ಪೊಲೀಸ್ ಠಾಣಾಧಿಕಾರಿಗಳು ಇದ್ಯಾವುದನ್ನು ಮಾಡದೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮಾನವ ಹಕ್ಕುಗಳನ್ನ ಉಲ್ಲಂಘಿಸಿ ಯುವಕರ ಮೇಲೆ ಮನಬಂದಂತೆ ಥಳಿಸಿರುವುದು ಕಾನೂನು ರೀತಿಯಲ್ಲಿ ಅಕ್ಷಮ್ಯ ಅಪರಾಧ.
ಈ ಹಿಂದೆ ಘನ ನ್ಯಾಯಾಲಯವು ಪೋಲಿಸ್ ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಯಾವ ರೀತಿಯಲ್ಲಿ ಪೊಲೀಸ್ ಇಲಾಖೆಯವರು ವರ್ತಿಸಬೇಕು ಎಂಬುದನ್ನ ಸ್ಪಷ್ಟವಾಗಿ ತಿಳಿಸಿರುತ್ತದೆ. ಇದರ ಜೊತೆಗೆ ನೆರವನ್ನು ಪಡೆದುಕೊಂಡು ಬರುವ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ಕಳಂಕ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು ಹಾಗೂ ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಮಾರ್ಪಡಿಸಬೇಕು. ಸಾರ್ವಜನಿಕರು ಯಾವುದೇ ಭಯವಿಲ್ಲದೆ ಠಾಣೆಗೆ ಬರುವಂತಿರಬೇಕು.ಅಂದರೆ ಪೊಲೀಸ್ ಠಾಣೆಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಿರಬಾರದು ಎಂಬ ಸ್ಪಷ್ಟವಾದ ಆದೇಶವನ್ನು ಘನ ನ್ಯಾಯಾಲಯವು ನೀಡಿರುತ್ತದೆ.
ಆದರೆ ಆನಂದಪುರ ಪೊಲೀಸ್ ಠಾಣಾಧಿಕಾರಿಗಳು ನ್ಯಾಯಾಲಯದ ಹಾಗೂ ಇಲಾಖೆಯ ಆದೇಶಗಳನ್ನು ಉಲ್ಲಂಘಿಸಿ ಮಾನವ ಹಕ್ಕುಗಳನ್ನ ಕಸಿದುಕೊಳ್ಳುವ ಮೂಲಕ, ಮರಳು ಮಾಫಿಯದವರ ಒತ್ತಡಕ್ಕೆ ಮಣಿದು ತ್ಯಾಗರ್ತಿ ಗ್ರಾಮದ ಯುವಕರ ಮೇಲೆ ಮನಬಂದಂತೆ ಥಳಿಸಿದ್ದಾರೆ. ಘಟನೆಯನ್ನು ಮುಚ್ಚಿಹಾಕಲು ಯುವಕರ ಮೇಲೆ ಒತ್ತಡ ಹಾಕಿದ್ದಾರೆ. ಒತ್ತಡಕ್ಕೆ ಮಣಿಯದ ಯುವಕರ ಮೇಲೆ ಬೆದರಿಕೆಯನ್ನು ಹಾಕಿದ್ದಾರೆ ಎಂಬ ಮಾಹಿತಿ ನೊಂದ ಯುವಕರ ಪೋಷಕರಿಂದ ಮಾಧ್ಯಮಕ್ಕೆ ಬಂದಿರುತ್ತದೆ.
ಕೂಡಲೇ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಕಳೆದ ಎರಡು ದಿನಗಳ ಹಿಂದೆ ಅನಂದಪುರ ಪೋಲಿಸ್ ಠಾಣೆಯಲ್ಲಿ ಯುವಕರ ಮೇಲೆ ನಡೆದ ಥಳಿತಕ್ಕೆ ಸಂಬಂಧಿಸಿದಂತೆ ಸಮಗ್ರವಾದ ವರದಿಯನ್ನ ಪಡೆದು. ತಪ್ಪಿತಸ್ಥರ ಮೇಲೆ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ನೊಂದ ಪೋಷಕರು ಆಗ್ರಹಿಸಿದ್ದಾರೆ.
0 Comments