ಬೆಳಂದೂರು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ.!

ಮಂದಾರ ನ್ಯೂಸ್, ಸಾಗರ : ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಠಾಣಾ ಸರಹದ್ದು ತ್ಯಾಗರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಂದೂರು ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಲಕ್ಷ್ಮಿ ರಂಗನಾಥ ದೇವರ ಮೂರ್ತಿಯನ್ನು ಕಿತ್ತೆಸೆದು ನಿಧಿ ಶೋಧನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಂದೂರು ಗ್ರಾಮಸ್ಥರು ಕಳೆದ ವರ್ಷ ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.

ದಿನಾಂಕ 21.04.2023 ರಂದು ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದ ಲಕ್ಷ್ಮಿ ರಂಗನಾಥ ದೇವರ ವಿಗ್ರಹವನ್ನು ಕಿತ್ತೆಸೆದು ನಿಧಿ ಶೋಧನೆಯನ್ನು ದುಷ್ಕರ್ಮಿಗಳು ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬೆಳಂದೂರು ಗ್ರಾಮದ ಗ್ರಾಮಸ್ಥರು ಅಂದಿನ ಆನಂದಪುರ ಪೋಲಿಸ್ ಠಾಣೆಯ ಠಾಣಾಧಿಕಾರಿಗಳಿಗೆ ದೂರನ್ನು ನೀಡಿದ್ದರು. ಆದರೆ ಅಂದಿನ ಪೊಲೀಸ್ ಠಾಣಾಧಿಕಾರಿಗಳು ಗ್ರಾಮಸ್ಥರ ದೂರನ್ನು ದಾಖಲಿಸಿಕೊಳ್ಳದೆ ಆರೋಪಿಗಳ ರಕ್ಷಣೆಗೆ ನಿಂತಿದ್ದರೂ ಎಂಬ ಆರೋಪ ಪ್ರಬಲವಾಗಿ ಕೇಳಿ ಬಂದಿತ್ತು.

ಕಳೆದ ಮೂರು ತಿಂಗಳ ಹಿಂದೆ ರೈತ ಸಂಘಟನೆಗಳ ಸಹಕಾರದೊಂದಿಗೆ ಬೆಳಂದೂರು ಗ್ರಾಮಸ್ಥರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆಯನ್ನು ಹಾಕಿದ್ದರು. ಅಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿಧಿ ಕಳ್ಳತನಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ತನಿಖೆ ನಡೆಸಲಾಗುವುದು ಎಂಬ ಭರವಸೆಯನ್ನು ರೈತ ಸಂಘಟನೆಯ ಮುಖಂಡರು ಹಾಗೂ ಊರಿನ ಗ್ರಾಮಸ್ಥರಿಗೆ ನೀಡಿದ್ದರು. ಗ್ರಾಮಸ್ಥರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಯಿತು.
ಪೊಲೀಸ್ ಇಲಾಖೆಯವರು ತನಿಖೆಯನ್ನು ನಡೆಸುವಲ್ಲಿ ವಿಳಂಬ ಮಾಡುತ್ತಿದ್ದು, ಊರಿನ ಗ್ರಾಮಸ್ಥರು ಪೋಲಿಸ್ ಇಲಾಖೆಯ ವಿಳಂಬ ನೀತಿಯನ್ನ ಖಂಡಿಸಿ 18ನೇ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಮತ್ತು ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಬೆಳಂದೂರು ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುತ್ತಿದ್ದರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನ ಕಡ್ಡಾಯವಾಗಿದೆ. ಯಾರೊಬ್ಬರೂ ಮತದಾನದಿಂದ ವಂಚಿತವಾಗಬಾರದು. ಪ್ರತಿಯೊಬ್ಬ ನಾಗರಿಕನು ತಮ್ಮ ಹಕ್ಕನ್ನು ಚಲಾಯಿಸಬೇಕು. ಇದು ಸಂವಿಧಾನದಲ್ಲಿ ನಮಗೆ ನೀಡಿರುವ ಹಕ್ಕಾಗಿದೆ.

ಪ್ರತಿ ನಾಗರಿಕರು ತಮ್ಮ ಹಕ್ಕನ್ನು ಚಲಾಯಿಸಬೇಕಾದರೆ ಅವರ ಅಗತ್ಯ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಮತ್ತು ಪ್ರಾಮಾಣಿಕವಾಗಿ ಅವರಿಗೆ ಒದಗಿಸುವ ಕೆಲಸವನ್ನು ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕು.

ದೇವಸ್ಥಾನದ ದೇವರ ವಿಗ್ರಹವನ್ನು ಕಿತ್ತೆಸೆದು ನಿಧಿಶೋದನೆ ನಡೆಸಿದ ಆರೋಪಿಗಳ ವಿಚಾರಣೆಗೆ ಸಂಬಂಧಿಸಿದಂತೆ ಶಾಸಕಾಂಗ ಮತ್ತು ಕಾರ್ಯಾಂಗ ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ಬೆಳಂದೂರು ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ಬಂದಿರುವುದು ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.
ಬೆಳಂದೂರು ಗ್ರಾಮದ ಲಕ್ಷ್ಮಿ ರಂಗನಾಥ ದೇವಸ್ಥಾನದ ನಿಧಿ ಕಳ್ಳತನಕ್ಕೆ ಸಂಬಂಧಿಸಿದಂತೆ ಊರಿನ ಗ್ರಾಮಸ್ಥರು ಆರೋಪಿಗಳು ಇಂಥವರೇ ಎಂಬ ಮಾಹಿತಿಯನ್ನು ನೀಡಿದ್ದರು ಪೋಲಿಸ್ ಇಲಾಖೆಯವರು ಮಾತ್ರ ತಮ್ಮ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಭಾಯಿಸುತ್ತಿಲ್ಲ. 

ಒಂದು ವೇಳೆ ಪೊಲೀಸ್ ಇಲಾಖೆ ತನಿಖೆ ನಡೆಸುವುದೇ ಆದರೆ ಅಂದಿನ (22/4/2023) ಪೊಲೀಸ್ ಠಾಣಾಧಿಕಾರಿ ಇವರಿಂದಲೇ ತನಿಖೆ ಆರಂಭವಾಗಬೇಕು. ಒಂದು ಮಾತಂತೂ ಸತ್ಯ ನಿಧಿ ಕಳ್ಳತನಕ್ಕೆ ಸಂಬಂಧಿಸಿದಂತೆ ಆನಂದಪುರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರೆ ಸಿಬ್ಬಂದಿ ವರ್ಗದವರಿಗೆ ಸಂಪೂರ್ಣವಾದ ಮಾಹಿತಿ ಇದೆ. ಅಷ್ಟೇ ಅಲ್ಲದೆ ತೆರೆ- ಮರೆಯಲ್ಲಿ ಇವರ ಸಹಕಾರವು ಇದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಆನಂದಪುರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕಾನೂನು &ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತಿದೆ. ಜನಸಾಮಾನ್ಯರಿಗೆ ನ್ಯಾಯ ಎಂಬುದು ಕನಸಿನ ಮಾತಾಗಿದೆ.

ಕಳೆದ ಒಂದು ವಾರದ ಹಿಂದೆ ಅಮಾಯಕ ಯುವಕರ ಮೇಲೆ ಪೋಲಿಸ್ ಠಾಣಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಮನಬಂದಂತೆ ಥಳಿಸಿದ್ದಾರೆ. ಈ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಮಾಯಕ ಯುವಕರ ಮೇಲೆ ಮನಸ್ಸಿಗೆ ಬಂದಂತೆ ಹೊಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂಥಾಗಿದೆ.

ಮಾನ್ಯ ಪೂರ್ವ ವಲಯ ಐಜಿಪಿ ಅಧಿಕಾರಿಗಳು ಆನಂದಪುರ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಠಾಣಾ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವ ಮೂಲಕ ನಿಧಿ ಶೋಧನೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಮತಿಯ ಭಾವನೆಗೆ ಧಕ್ಕೆ ತಂದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಶ್ರೀ ಕೃಷ್ಣನ ಜನ್ಮಸ್ಥಾನಕ್ಕೆ ಕಳಿಸಿಕೊಡಬೇಕು. ಈ ವಿಚಾರದಲ್ಲಿ ಮಾನ್ಯ ಐಜಿಪಿ ಅವರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.

ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ಬಂದಿರುವ ಗ್ರಾಮಸ್ಥರನ್ನು ಮನವೊಲಿಸಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು . ಆ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಜವಾಬ್ದಾರಿಯನ್ನ ಅಧಿಕಾರಿಗಳು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂಬುದೇ ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಯ ಆಶಯವಾಗಿದೆ.

Post a Comment

0 Comments