ಮಂದಾರ ನ್ಯೂಸ್, ಹರಿಹರ : ಪೌರಕಾರ್ಮಿಕರು ಸಮಾಜದ ಆರೋಗ್ಯ ಕಾಪಾಡುವ ವೈದ್ಯರಿದ್ದಂತೆ. ನಗರದ ಆರೋಗ್ಯ ಹಾಗೂ ಸ್ವಚ್ಛತೆ ನಗರಸಭೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಕೆಲಸದ ಮೇಲೆ ನಿಂತಿದೆ. ಹೀಗಾಗಿ ಪೌರ ಕಾರ್ಮಿಕರು ನಗರದ ಜೀವನಾಡಿಗಳು ಎಂದರು ತಪ್ಪಾಗಲಾರದು.
ಹರಿಹರ ನಗರಸಭೆಯಲ್ಲಿ ಪೌರ ಕಾರ್ಮಿಕರಿಗೆ ಕಳೆದ ಎರಡು ವರ್ಷದಿಂದ ಕೈಗಳಿಗೆ ಗ್ಲೌಸ್ ಸೇರಿದಂತೆ ಯಾವುದೇ ಸುರಕ್ಷತಾ ಸಲಕರಣೆ ಇಲ್ಲ. ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಆರೋಗ್ಯ ತಪಾಸಣೆ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದೆ. ಉಪಹಾರ ಭತ್ಯೆ ಕೈ ಸೇರಿದಾಗಲೇ ಗ್ಯಾರೆಂಟಿ.
ಇದು ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಗುತ್ತಿಗೆ ಪೌರಕಾರ್ಮಿಕರ ನೋವಿನ ಕಥೆ. ಮನೆ, ವಾಣಿಜ್ಯ ಕಟ್ಟಡ, ಹೋಟೆಲ್ ಇನ್ನಿತರ ಕಡೆಗಳಿಂದ ತ್ಯಾಜ್ಯ ಸಂಗ್ರಹ, ವಿಲೇವಾರಿ, ಚರಂಡಿ ಸ್ವಚ್ಛತೆ, ಕಸ ಗುಡಿಸುವುದು ಇನ್ನಿತರ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಗುತ್ತಿಗೆ ಪೌರಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಲಕರಣೆಗಳು ಇಲ್ಲವಾಗಿವೆ. ಕೆಲವರ ಪ್ರಕಾರ ಒಂದು ವರ್ಷದ ಹಿಂದೆ ನೀಡಿದ್ದ ಸಲಕರಣೆಗಳು ಕೆಲವೇ ತಿಂಗಳಲ್ಲಿ ಹರಿದು ಹಾಳಾಗಿದ್ದು, ನಂತರದಲ್ಲಿ ಯಾವುದೇ ಸಲಕರಣೆ ನೀಡಿಲ್ಲವಂತೆ.
ಪ್ಲಾಸ್ಟಿಕ್ ಚೀಲವೇ ಗ್ಲೌಸ್: ತ್ಯಾಜ್ಯ ಸಂಗ್ರಹಣೆ ವಾಹನಗಳಲ್ಲಿ ಬರುವ ಮಹಿಳಾ ಗುತ್ತಿಗೆ ಕಾರ್ಮಿಕರು ಕೈಗವಸುಗಳಿಲ್ಲದೆ, ಸಣ್ಣ ಪ್ಲಾಸ್ಟಿಕ್ ಚೀಲಗಳನ್ನೇ ಕೈಗೆ ಸುತ್ತಿಕೊಂಡು ತ್ಯಾಜ್ಯವನ್ನು ವಾಹನಕ್ಕೆ ಸುರಿಯುತ್ತಾರೆ. ಮುಖಕ್ಕೆ ಧರಿಸುವ ಕವಚವೂ ಇಲ್ಲದೆ, ದುರ್ವಾಸನೆಯಲ್ಲೇ ಕಾರ್ಯ ನಿರ್ವಹಿಸಬೇಕಾಗಿದೆ. ಸ್ವತ್ಛತಾ ಗುತ್ತಿಗೆ ಟೆಂಡರ್ ಪಡೆಯಬೇಕಾದರೆ ಎಷ್ಟು ಜನ ಗುತ್ತಿಗೆ ಪೌರಕಾರ್ಮಿಕರು ಇರಬೇಕು, ಅವರಿಗೆ ಏನೆಲ್ಲಾ ಸುರಕ್ಷತಾ ಸಲಕರಣೆಗಳನ್ನು ನೀಡಬೇಕು, ವೇತನ ಎಷ್ಟು , ಭವಿಷ್ಯ ನಿಧಿ, ಆರೋಗ್ಯ ಸೌಲಭ್ಯ ಇನ್ನಿತರ ಸವಲತ್ತುಗಳನ್ನು ನೀಡಬೇಕು ಎಂಬ ನಿಯಮಗಳಿರುತ್ತವೆ. ಅದಕ್ಕೆ ಒಪ್ಪಿಕೊಂಡೇ ಗುತ್ತಿಗೆದಾರರು ಟೆಂಡರ್ ಪಡೆಯುತ್ತಾರೆ.
ಒಮ್ಮೆ ಟೆಂಡರ್ ಪಡೆದ ಮೇಲೆ ನಿಯಮ ಪಾಲನೆಯನ್ನು ಗುತ್ತಿಗೆದಾರರು ಮಾಡುವುದಿಲ್ಲ. ನಿಯಮ ಪಾಲನೆ ಆಗುತ್ತಿವೆಯೋ ಇಲ್ಲವೋ ಎಂಬುದನ್ನು ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು ಪರಿಶೀಲಿಸುವುದಿಲ್ಲ. ಎಂತಹ ಸಮಸ್ಯೆ ಎದುರಾದರೂ, ಏನಾದರೂ ಕೇಳಿದರೆ ಎಲ್ಲಿ ಕೆಲಸದಿಂದ ತೆಗೆದು ಬಿಡುತ್ತಾರೋ ಎಂಬ ಕಾರಣದಿಂದ ಗುತ್ತಿಗೆ ಪೌರಕಾರ್ಮಿಕರು ಸಹ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗದೆ ಕಾರ್ಯನಿರ್ವಹಿಸುವಂತಾಗಿದೆ.
ಆರೋಗ್ಯ ತಪಾಸಣೆ: ಸರಕಾರದ ಸುತ್ತೋಲೆ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಶಿಬಿರ ನಡೆಸಬೇಕು. ಆದರೆ ನಡೆಯುತ್ತಿಲ್ಲ ಎಂಬ ಆರೋಪ ಹಲವರದ್ದು. ಪೌರಕಾರ್ಮಿಕರಿಗೆ ನಿತ್ಯವೂ ಉಪಹಾರ ನೀಡಬೇಕಾಗಿದ್ದರೂ, ಉಪಹಾರ ಪೂರೈಕೆ ಗುತ್ತಿಗೆ ಪಡೆಯುವವರು ಗುಣಮಟ್ಟದ ಆಹಾರ ನೀಡದಿದ್ದರೆ ಅಥವಾ ಪೌರಕಾರ್ಮಿಕರಿಗೆ ಅದು ರುಚಿಸದಿದ್ದರೆ ಹೇಗೆ ಎಂಬ ಹಿನ್ನೆಲೆಯಲ್ಲಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ, ಪೌರಕಾರ್ಮಿಕರಿಗೆ ಉಪಹಾರ ಬದಲು ಉಪಹಾರ ಭತ್ಯೆ ನೀಡಿಕೆಗೆ ನಿರ್ಣಯಿಸಬೇಕು ಅದರಂತೆ ಅವರಿಗೆ ತಿಂಗಳ ವೇತನ ಜತೆಗೆ ಉಪಹಾರ ಭತ್ಯೆ ನೀಡಬೇಕಾಗುತ್ತದೆ. ಅನೇಕ ಪೌರಕಾರ್ಮಿಕರಿಗೆ ಉಪಹಾರ ಭತ್ಯೆ ಸಹ ಸಕಾಲಕ್ಕೆ ಸಿಗುತ್ತಿಲ್ಲವಾಗಿದೆ. ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಇಂತಹ ದುಸ್ಥಿತಿ ಬಗ್ಗೆ ನಗರಸಭೆಯ ಆಯುಕ್ತರು, ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಕಾರ್ಮಿಕರ ಸಂಘಟನೆಗಳು ಸಹ ಗಟ್ಟಿ ಧ್ವನಿ ಎತ್ತಬೇಕಾಗಿದೆ.
ಈಗಾಗಲೇ ರಾಜ್ಯಾದ್ಯಂತ ಮುಂಗಾರು ಬಿರುಸುಗೊಂಡಿದೆ .ಅದರಂತೆ ಹರಿಹರದಲ್ಲೂ ಸಹ ಮುಂಗಾರು ಮಳೆ ವಿಪರೀತವಾಗಿ ಸುರಿಯುತ್ತಿರುವ ಪರಿಣಾಮ ನಗರದ ಚರಂಡಿಗಳು ತುಂಬಿ ಹರಿಯುತ್ತಿದೆ. ಆದರೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವ ಪೌರಕಾರ್ಮಿಕರಿಗೆ ಮಳೆಯಿಂದ ರಕ್ಷಣೆ ಪಡೆಯಲು ಬೇಕಾದ ರಕ್ಷಣಾ ಸಾಮಗ್ರಿಗಳು ಇದುವರೆಗೂ ಒದಗಿಸಿ ಕೊಟ್ಟಿಲ್ಲ, ಮಳೆಯಲ್ಲೇ ನಗರದ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಸರಿಸುಮಾರು 102 ಜನ ಪೌರಕಾರ್ಮಿಕರು ಇದ್ದು, (ಇದರಲ್ಲಿ ನೀರು ಗಂಟೆಗಳು ಮತ್ತು ಟ್ರ್ಯಾಕ್ಟರ್ಗಳಿಗೆ ತ್ಯಾಜ್ಯ ಹೊತ್ತು ಹಾಕುವ ಕಾರ್ಮಿಕರು ಹೊರತುಪಡಿಸಿ ) ಇವರ ಸುರಕ್ಷತೆಗೆ ಬೇಕಾದ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸಿಕೊಡುವಲ್ಲಿ ಹರಿಹರ ನಗರಸಭೆ ಸಂಪೂರ್ಣವಾಗಿ ವಿಫಲವಾಗಿದೆ.
ಕೂಡಲೇ ಹರಿಹರ ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕೂಡಲೇ ನೂತನ ಆಯುಕ್ತರು ಅವರೆಲ್ಲರ ಆರೋಗ್ಯವನ್ನು ತಪಾಸಣೆ ನಡೆಸಿ. ಅವರಿಗೆ ಬೇಕಾದ ರಕ್ಷಣಾ ಸಾಮಗ್ರಿಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ ಎಂಬುದು ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಯ ಆಶಯವಾಗಿದೆ.
{ ಭಾರತೀಯ ಸಂವಿಧಾನದ 42 ಮತ್ತು 43ನೇ ವಿಧಿಯ ಅಡಿಯಲ್ಲಿ (ರಾಜ್ಯ ನೀತಿಯ ನಿರ್ದೇಶನ ತತ್ವಗಳು) ಯೋಗ್ಯವಾದ ಜೀವನಮಟ್ಟವನ್ನು ಖಾತ್ರಿಪಡಿಸುವ ಕೆಲಸದ ಮತ್ತು ಕೆಲಸದ ಪರಿಸ್ಥಿತಿಗಳ ನ್ಯಾಯಯುತ ಮತ್ತು ಮಾನವೀಯ ಪರಿಸ್ಥಿತಿಗಳನ್ನು ಭದ್ರಪಡಿಸುವುದು ರಾಜ್ಯದ ಕರ್ತವ್ಯವೆಂದು ಗುರುತಿಸಲ್ಪಟ್ಟಿದೆ. "ಉದ್ಯೋಗದಾತರು ರಕ್ಷಣಾತ್ಮಕ ಸಾಧನಗಳನ್ನು ಒದಗಿಸುವುದು, ಸುರಕ್ಷಿತ ಕೆಲಸದ ಅಭ್ಯಾಸಗಳ ಅನುಷ್ಠಾನ ಮತ್ತು ಎಲ್ಲಾ ಸಂಭಾವ್ಯ ಆರೋಗ್ಯ ಅಪಾಯಗಳಿಂದ ಕಾರ್ಮಿಕರನ್ನು ರಕ್ಷಿಸಲು ಅವರ ಆರೋಗ್ಯದ ಆವರ್ತಕ ಮೇಲ್ವಿಚಾರಣೆಯಂತಹ ಕ್ರಮಗಳನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ "}
0 Comments