ಮಂದಾರ ನ್ಯೂಸ್ : ಈಗಾಗಲೇ ರಾಜ್ಯಾದ್ಯಂತ ಡೆಂಗ್ಯು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮನೆಯ ಸುತ್ತ- ಮುತ್ತಲಿನ ವಾತಾವರಣ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಆರೋಗ್ಯ ಇಲಾಖೆಯ ಸಹಾಯಕರು ಮನೆ, ಮನೆಗೆ ತೆರಳಿ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಈಜಿಪ್ಟ್ ಎಂಬ ಸೊಳ್ಳೆಯಿಂದ ಡೆಂಗ್ಯು ಎಂಬ ಸಾಂಕ್ರಾಮಿಕ ರೋಗ ಹರಡುತ್ತಿದೆ. ಈ ಸೊಳ್ಳೆಗಳ ನಿಯಂತ್ರಣಕ್ಕೆ ಸುತ್ತಲಿನ ವಾತಾವರಣ ಪರಿಶುದ್ಧವಾಗಿರಬೇಕು. ಡೆಂಗ್ಯು ಕಾಯಿಲೆಯನ್ನು ನಿಯಂತ್ರಿಸಬೇಕಾದರೆ ಮನೆಯ ಸುತ್ತಮುತ್ತಲಿನ ವಾತಾವರಣದ ಜೊತೆಗೆ ಗ್ರಾಮದ ಸ್ವಚ್ಛತೆಯ ಕಡೆಯೂ ಗಮನ ಹರಿಸಬೇಕಾಗುತ್ತದೆ ಅಲ್ಲವೇ?
ರಾಜ್ಯದಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಲಾಗುತ್ತಿದ್ದರು, ಹೊಳೆ ಸಿರಿಗೆರೆಯ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಚರಂಡಿಗಳನ್ನು ಸ್ವಚ್ಛತೆ ಮಾಡುವ ಕಡೆ ಗಮನಹರಿಸುತ್ತಿಲ್ಲ ಎಂದು ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರು ಅಭಿವೃದ್ಧಿ ಅಧಿಕಾರಿಗಳ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಈಗಾಗಲೇ ಹೊಳೆ ಸಿರಿಗೆರೆ ಗ್ರಾಮದಲ್ಲಿರುವ ಬಹುತೇಕ ಚರಂಡಿಗಳು ಗಬ್ಬು ನಾರುತಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸದೆ ಅದೆಷ್ಟು ವರ್ಷ ಕಳೆದಿದೆಯೋ ತಿಳಿಯದು. ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೆ ಅವರು ಈ ವಿಚಾರದಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ನಿನ್ನೆ ದಿನ ತಾಲೂಕು ಪಂಚಾಯಿತಿ ಇಒ ಹಾಗೂ ಜಿಲ್ಲಾ ಪಂಚಾಯತ್ ಸಿ ಇ ಓ ಇವರ ಗಮನಕ್ಕೆ ತರಲಾಯಿತು. ಅವರು ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಸೂಚನೆ ನೀಡಿರುತ್ತಾರೆ. ಅಧಿಕಾರಿಗಳ ಸೂಚನೆಯಂತೆ ಹೊಳೆ ಸಿರಿಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಬೇಕಿತ್ತು. ಆದರೆ ಇವರು ಕಾಟಾಚಾರಕ್ಕೆ ಒಂದೆರಡು ಚರಂಡಿಗಳನ್ನು ಸ್ವಚ್ಛಗೊಳಿಸಿ ಮೇಲಧಿಕಾರಿಗಳಿಗೆ ಫೋಟೋಗಳನ್ನು ಕಳುಹಿಸಿರುತ್ತಾರೆ. ಆದರೆ ಗ್ರಾಮದಲ್ಲಿ ಯಾವ ಚರಂಡಿಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಿಲ್ಲ ಎಂದು ಗ್ರಾಮದ ಯುವಕರಾದ ರಾಮಕೃಷ್ಣಪ್ಪನವರು ಅಭಿವೃದ್ಧಿ ಅಧಿಕಾರಿಯ ವಿರುದ್ಧ ತಮ್ಮ ಆಕ್ರೋಶವನ್ನು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಹೊರ ಹಾಕಿದರು.
ಚರಂಡಿ ಸ್ವಚ್ಛಗೊಳಿಸುವ ಸಿಬ್ಬಂದಿಗಳಿಗೆ ಸುರಕ್ಷತಾ ಸಾಮಗ್ರಿಗಳನ್ನು ಸಹ ವಿತರಣೆ ಮಾಡಿಲ್ಲ. ಯಾರು ಹೋಗಿ ನಮ್ಮ ಮನೆಯ ಮುಂದೆ ಇರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ಎಂದು ದೊಡ್ಡ ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಾರೋ ಅವರ ಮನೆಯ ಚರಂಡಿಗಳನ್ನು ಮಾತ್ರ ಸ್ವಚ್ಛ ಮಾಡುತ್ತಿದ್ದಾರೆ. ಆದರೆ ಗ್ರಾಮದಲ್ಲಿರುವ ಎಲ್ಲಾ ವಾರ್ಡಿನ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಅಭಿವೃದ್ಧಿ ಅಧಿಕಾರಿಗಳು ಮಾಡುತ್ತಿಲ್ಲ.
ಕೊಳಚೆ ತುಂಬಿದ ಚರಂಡಿಗಳಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಜನ ಜಾನುವಾರುಗಳು ವಾಸ ಮಾಡದಂತ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಯಾವ ಕ್ಷಣದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತದೆ ಎಂಬ ಭೀತಿ ಜನರಲ್ಲಿ ಮನೆಮಾಡಿದೆ.
ಒಂದು ಕಡೆ ನಿಮ್ಮ ಮನೆಯ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ಜಾಗೃತಿ ಮೂಡಿಸುತ್ತೀರಾ. ಆದರೆ ನೀವು ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂಬ ಅರಿವು ಹೊಂದಿರುವುದಿಲ್ಲ. ಊರಿಗೆ ಉಪದೇಶ ಮಾಡುವವರು ಮೊದಲು ತಮ್ಮ ಗ್ರಾಮದ ಚರಂಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂಬ ಅರಿವು ಹೊಂದಿರಬೇಕು ಅಲ್ಲವೇ?
ಹೊಳೆ ಸಿರಿಗೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮದಲ್ಲಿರುವ ಎಲ್ಲಾ ಚರಂಡಿಗಳು ಗಬ್ಬು ನಾರುತಿದ್ದು , ಸೊಳ್ಳೆಗಳ ಸಾಕಾಣಿಕೆಗಳ ಕೇಂದ್ರದಂತೆ ಚರಂಡಿಗಳು ಕಾಣುತ್ತಿದೆ.
ಮಾನ್ಯ ಜಿಲ್ಲಾ ಪಂಚಾಯತ್ ಸಿಇಒ ಅವರು ಕೂಡಲೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಚರಂಡಿಗಳನ್ನು ಹಾಗೂ ಗ್ರಾಮದ ಸ್ವಚ್ಛತೆಯನ್ನು ಕಾಪಾಡುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಬೇಕು. ಗ್ರಾಮದಲ್ಲಿ ಡೆಂಗ್ಯು ಪ್ರಕರಣಗಳು ಬೆಳಕಿಗೆ ಬಾರದಂತೆ ತಡೆಗಟ್ಟಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಸ್ವಚ್ಛ ಭಾರತ ಪರಿಕಲ್ಪನೆ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಹಳ್ಳ ಹಿಡಿಯುತ್ತಿದೆ. ಮುಂಗಾರು ಆರಂಭವಾಗುವ ಮೊದಲೇ ಜಾಗೃತರಾಗಿ ಗ್ರಾಮದ ಚರಂಡಿಗಳನ್ನ ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕಿತ್ತು. ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದಲೇ ಡೆಂಗ್ಯು ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಮಾಡಲು ಯೋಗ್ಯರಲ್ಲದ ಅಧಿಕಾರಿಗಳನ್ನು ಇಲಾಖೆಯಲ್ಲಿ ಏಕೆ ಇಟ್ಟುಕೊಳ್ಳಬೇಕು ?ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುತಿದೆ.
0 Comments