ಕುಮಾರ ಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ತಡರಾತ್ರಿ ಅಕ್ರಮ ಮರಳು ಗಣಿಗಾರಿಕೆ.?!


ಮಂದಾರ ನ್ಯೂಸ್ ರಾಣೇಬೆನ್ನೂರು : ಕುಮಾರ ಪಟ್ಟಣ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸದ್ದಿಲ್ಲದೆ ಅಕ್ರಮ ಮರಳು ಗಣಿಗಾರಿಕೆ ಆರಂಭವಾಗಿದೆ.

ತುಂಗಭದ್ರಾ ನದಿಯ ಒಡಲನ್ನು ಬಗೆದು ಅಕ್ರಮವಾಗಿ ಮರಳನ್ನು ತೆಗೆಯಲಾಗುತ್ತಿದ್ದು, ತಡರಾತ್ರಿ ಮರಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಇದು ಭೂ ಮತ್ತು ಗಣಿ ಇಲಾಖೆಯವರ ಕಣ್ಣಿಗೆ ಮಣ್ಣೆರಚಿ ಈ ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. 

ಕುಮಾರ ಪಟ್ಟಣಂ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಗಣೇಶನ ಹಬ್ಬದ ಬಂದೋಬಸ್ತಿನಲ್ಲಿ ಇರುವ ಈ ಸಂದರ್ಭವನ್ನು ನೋಡಿಕೊಂಡೆ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದು ಇದು ಪೊಲೀಸ ಇಲಾಖೆಯವರ ಗಮನಕ್ಕೆ ಬಂದಂತೆ ಕಾಣುತ್ತಿಲ್ಲ. 

ಹಾವೇರಿ ಜಿಲ್ಲೆಗೆ ನೂತನವಾಗಿ ಹಿರಿಯ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳಾಗಿ ದಕ್ಷ ,ಪ್ರಾಮಾಣಿಕ ಅಧಿಕಾರಿ ನವೀನ್ ಅವರು ಶಿವಮೊಗ್ಗದಿಂದ ವರ್ಗಾವಣೆಯಾಗಿ ಹಾವೇರಿ ಜಿಲ್ಲೆಗೆ ಬಂದಿದ್ದು ಇವರು ಹಾವೇರಿ ಜಿಲ್ಲೆ ಅದರಲ್ಲೂ ರಾಣೇಬೆನ್ನೂರು ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಾರಾ? ಕಾದು ನೋಡಬೇಕಾಗಿದೆ.

ಮಾನ್ಯ ಜಿಲ್ಲಾಧಿಕಾರಿಗಳು,ಹಿರಿಯ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳು, ಹಾಗೂ ಪೊಲೀಸ್ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಈ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕಾಗಿದೆ.

ಈಗಾಗಲೇ ಕುಮಾರ ಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಜಲ ಮಾಲಿನ್ಯವಾಗುತ್ತಿದ್ದು, ಭೂಮಿಯು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಮುಂದಿನ ದಿನದಲ್ಲಿ ಭೂಕಂಪಗಳು, ಅಂತರ್ಜಲ ಮಟ್ಟ ಕ್ಷೀಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೂಡಲೇ ಪರಿಸರದ ಮೇಲೆ ಆಗುತ್ತಿರುವ ಅದರಲ್ಲೂ ತುಂಗಭದ್ರ ನದಿಯ ಮೇಲೆ ಆಗುತ್ತಿರುವ ಈ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತಲಾಗಲಿ ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.

Post a Comment

0 Comments