ಮಂದಾರ ನ್ಯೂಸ್ : ಸಾಗರ ತಾಲೂಕು ಆನಂದಪುರ ಹೋಬಳಿಯಾದ್ಯಂತ ಸರ್ಕಾರಿ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರು ಸಂಬಂಧಿಸಿದ ಭೂ ಮತ್ತು ಗಣಿ ಹಾಗೂ ಅರಣ್ಯ ಇಲಾಖೆ ಭೂಗಳ್ಳರಿಗೆ ಕಾವಲು ನಾಯಿಗಳಾದ್ರಾ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಹಾಡು ಹಗಲೇ ರಾಜಾರೋಷವಾಗಿ ಸರ್ಕಾರಿ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರು ಅರಣ್ಯ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಜಾರಿರುವ ಹಿಂದಿನ ಮರ್ಮವಾದರೂ ಏನು? ರೈತರು ಹಲವು ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಭೂಮಿಯನ್ನು ದೌರ್ವಜನ್ಯದಿಂದ ವಶಪಡಿಸಿಕೊಳ್ಳುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಮ್ಮ ಇಲಾಖೆಯ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ದಂದೆಕೋರರ ಮೇಲೆ ಕ್ರಮ ಕೈಗೊಳ್ಳಲು ಧೈರ್ಯ ಇಲ್ಲದಾಯಿತೇ?
ಅರಣ್ಯ ಇಲಾಖೆಯ ಅಧಿಕಾರಿಗಳೇ ನಿಮ್ಮ ಅಧಿಕಾರ ದರ್ಪ ಹಾಗೂ ದೌರ್ಜನ್ಯವನ್ನು ರೈತರ ಮೇಲೆ ತೋರಿಸುವ ಬದಲು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿಗಳ ಮೇಲೆ ತೋರಿಸಿ. ನಿಮ್ಮ ಕೃಪಾಕಟಾಕ್ಷದಿಂದ ಸಾಗರ ತಾಲೂಕಿನಾದ್ಯಂತ ಅರಣ್ಯ ಸಂಪತ್ತು ದಿನದಿಂದ ದಿನಕ್ಕೆ ನಾಶವಾಗುತ್ತಿದೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇದು ನಿಮಗೂ ತಿಳಿದಿದೆ. ಇನ್ನು ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳೇ ಸಾಗರ ತಾಲೂಕಿನಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯುವಲ್ಲಿ ವಿಫಲವಾಗಿದ್ದು ಯಾಕೆ? ನಿಮ್ಮ ಮೇಲೆ ರಾಜಕೀಯ ಒತ್ತಡವೇನಾದರೂ ಇದೆಯೇ? ಈ ಹಿಂದೆ ಲೇಡಿ ಸಿಂಗಂ ಎಂದು ಖ್ಯಾತಿ ಪಡೆದಿದ್ದ ಭೂ ಮತ್ತು ಗಣಿ ಇಲಾಖೆಯ ಶಶಿಕಲಾ ಇವರಿಗೆ ಇದ್ದ ಧೈರ್ಯ ಈಗಿನ ಅವಿನಾಶ್ ಅವರಿಗೆ ಇಲ್ಲದಾಯಿತೇ? ಪುರುಷರಿಗಿಂತ ಯಾವುದಕ್ಕೂ ಕಮ್ಮಿ ಇಲ್ಲದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಶಶಿಕಲಾ ಇವರನ್ನು ರಾಜಕೀಯ ಒತ್ತಡದಿಂದ ವರ್ಗಾವಣೆ ಮಾಡಲಾಯಿತು ಎಂಬ ಮಾತು ನಿಜವಾಯಿತೇ?
ತಮ್ಮ ವಿಧಾನಸಭಾ ಕ್ಷೇತ್ರಾದ್ಯಂತ ಕೃಷಿ ಪಲವತ್ತಾದ ಭೂಮಿಯಲ್ಲಿ ಹಾಗೂ ಅರಣ್ಯ ಸಂಪತ್ತು ಹೊಂದಿರುವ ಹಸಿರು ವನದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರು ಶಾಸಕರು ಧ್ವನಿ ಎತ್ತುತ್ತಿಲ್ಲ .ಏಕೆ? ಈ ಹಿಂದೆ ಅಕ್ರಮ ಮರಳು ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ಶಾಸಕರು ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂಬ ಪ್ರಬಲ ಆರೋಪ ಮಾಡುವುದರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮೀಯ ಸನ್ನಿಧಾನದಲ್ಲಿ ಆಣೆ -ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದು ಮರೆತು ಹೋಯಿತೇ?
ಹಣಬಲ ಮತ್ತು ಸ್ವಾಭಿಮಾನದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ ಶಾಸಕರು ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನು ಮರೆತರೆ? ಅಕ್ರಮ ಚಟುವಟಿಕೆಗಳು ಇಲ್ಲದೆ ಅಧಿಕಾರ ನಡೆಸಲು ಸಾಧ್ಯವಿಲ್ಲವೇ? ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತದೆ ಎಂಬುದನ್ನು ಮರೆತಿರಬಹುದೇ?
ರಾಜಕೀಯ ಎದುರಾಳಿಗಳು, ವಿರೋಧ ಪಕ್ಷದ ನಾಯಕರು ಅಕ್ರಮ ಚಟುವಟಿಕೆಗಳ ಕುರಿತು ಧ್ವನಿ ಎತ್ತದೇ ಇರುವುದರ ಹಿಂದಿನ ಮರ್ಮವಾದರೂ ಏನು? ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾದರೂ ಯಾರು? ವಿರೋಧ ಪಕ್ಷದ ನಾಯಕರು ಪ್ರಬಲವಾಗಿ ಹೋರಾಟ ಮಾಡಬೇಕು ಅಲ್ಲವೇ? ಆದರೆ ಇದ್ಯಾವುದೂ ಆಗುತ್ತಿಲ್ಲ .ಏಕೆ? ಹೀಗೆ ಹತ್ತು ಹಲವು ಪ್ರಶ್ನೆಗಳೊಂದಿಗೆ ಭೂತಾಯಿಯ ಗರ್ಭವನ್ನು ಸೀಳಿ ಭೂತಾಯಿಯನ್ನು ಬಂಜೆ ಮಾಡಲಾಗುತ್ತಿದೆ.
ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವ ಕೆಲಸ ಕೇವಲ ಭೂ ಮತ್ತು ಗಣಿ ಇಲಾಖೆಯದ್ದು ಅಂದುಕೊಳ್ಳಬೇಡಿ. ಕಂದಾಯ ,ಅರಣ್ಯ, ಪೊಲೀಸ್ ಇಲಾಖೆ ನಿಮ್ಮ ಕರ್ತವ್ಯವು ಇದೆ ಎಂಬ ವಿಚಾರವನ್ನು ಮರೆಯಬೇಡಿ.
ಸಾಗರ ವಿಧಾನಸಭಾ ಕ್ಷೇತ್ರ ,ಆನಂದಪುರ ಹೋಬಳಿಯಾದ್ಯಂತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ.
ಪ್ರಕೃತಿಯ ಮೇಲೆ ಗದಾಪ್ರಹಾರ ನಡೆಸಿದವರ್ಯಾರು ಈ ಭೂಮಿ ಮೇಲೆ ಉಳಿದಿಲ್ಲ. ತಮ್ಮ ತಪ್ಪಿಗೆ ಶಿಕ್ಷೆ ಅನುಭವಿಸುವ ಕಾಲ ತುಂಬಾ ದಿನ ಉಳಿದಿಲ್ಲ. ಈಗಾಗಲೇ ಕೇರಳದ ವಯನಾಡ್ ಜಿಲ್ಲೆಯಲ್ಲಿ ನಡೆದ ಘಟನೆಗಳು ನಮ್ಮ ಕಣ್ಣ ಮುಂದೆ ಇದೆ ಎಂಬುದನ್ನ ಮರೆಯಬೇಡಿ. ಕ್ಷಣದ ಸುಖಕ್ಕಾಗಿ ಸಾಯುವ ತನಕ ತಿನ್ನುವ ಅನ್ನಕ್ಕೆ ಕಲ್ಲು ಹಾಕಿಕೊಳ್ಳಬೇಡಿ.
ಭೂ ಮತ್ತು ಗಣಿ ಹಾಗೂ ಅರಣ್ಯ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳೇ ಅಕ್ರಮ ಚಟುವಟಿಕೆಗಳಿಗೆ ಕಾವಲುಗಾರರಾಗಿ ಕೆಲಸ ಮಾಡದೆ ನಿಮ್ಮ ಕೆಲಸದಲ್ಲಿ ಕನಿಷ್ಠ ಪ್ರಾಮಾಣಿಕತೆಯನ್ನು ತೋರಿ ತಾಯಿಯ ಒಡಲನ್ನು ಕಾಪಾಡುವ ಕೆಲಸಕ್ಕೆ ಮುಂದಾಗಿ ಎಂಬುವುದೇ ನಮ್ಮ ಮಾಧ್ಯಮದ ಕಳಕಳಿಯ ಮನವಿಯಾಗಿದೆ.
0 Comments