ಮಂದಾರ ನ್ಯೂಸ್ ಸಾಗರ: ಹಿರೇಬಿಲಗುಂಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಳ್ಳ ಗ್ರಾಮದ ಸರ್ಕಾರಿ ಬೀಳು ಸರ್ವೇ ನಂಬರ್ 78 ಮತ್ತು 81 ರಲ್ಲಿ ಸರ್ಕಾರಿ ಭೂಮಿಯಲ್ಲಿ ಬೆಳೆದಿದ್ದ ಬೆಲೆಬಾಳುವ ಬೃಹತ್ ಗಾತ್ರದ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಕೃಪ ಆಶೀರ್ವಾದದಿಂದ ಕಡಿತಲೆ ಮಾಡಿರುತ್ತಾರೆ.
ತ್ಯಾಗರ್ತಿ ವಲಯ ಅರಣ್ಯ ಅಧಿಕಾರಿ ಮೌಲಾಲಿ ಹಾಗೂ ಮಂಜಪ್ಪ ಇವರು ಲಂಚದ ರೂಪದಲ್ಲಿ ಹಣವನ್ನು ಪಡೆದು ಮರಗಳ ಮಾರಣಹೋಮ ಮಾಡಲು ದಾರಿ ಮಾಡಿಕೊಡುತ್ತಿದ್ದಾರೆ ಎಂಬ ಆರೋಪ ಸ್ಥಳೀಯ ಸಾರ್ವಜನಿಕರಿಂದ ಕೇಳಿ ಬಂದಿದೆ.
ಇಂದು ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರಿ ಭೂಮಿಯ ಸ್ಥಳಕ್ಕೆ ಹೋಗಿ ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು.
ಸರ್ವೇ ನಂಬರ್ 78 ಮತ್ತು 81 ರಲ್ಲಿರುವ ಕಂದಾಯ ಭೂಮಿಯನ್ನು ಮಳ್ಳ ಮಜರೆ ಕೊಪ್ಪ ವಾಸಿಗಳಾದ ಉಮೇಶ್ ಗೌಡ ಬಿನ್ ಲೋಕಪ್ಪ ಗೌಡ, ಪರಮೇಶ್ವರ್ ಗೌಡ ಬಿನ್ ಲೋಕಪ್ಪ ಗೌಡ ಹಾಗೂ ಕಾಗೋಡುದಿಂಬ ನಿವಾಸಿಗಳಾದ ಸತ್ಯನಾರಾಯಣ ಗಾಮಪ್ಪ ಇವರು ಮಳ್ಳ ಗ್ರಾಮದ ಸರ್ಕಾರಿ ಬೀಳು ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಬೆಳೆದಿರುವ ಬೆಲೆಬಾಳುವ ಬೃಹತ್ ಮರಗಳನ್ನು ರಾತ್ರೋರಾತ್ರಿ ಕಡಿತಲೆ ಮಾಡಿ ಸಾಗಾಣಿಕೆ ಮಾಡಿರುತ್ತಾರೆ.
ಸರ್ಕಾರಿ ಭೂಮಿಯಲ್ಲಿ ಬೆಳೆದಿರುವ ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಅರಣ್ಯ ಇಲಾಖೆಯ ಮಂಜಪ್ಪ ಹಾಗೂ ಮೌಲಾಲಿ ಅವರು ಮೌಖಿಕವಾಗಿ ಅನುಮತಿಯನ್ನು ಕೊಟ್ಟಿರುತ್ತಾರೆ. ಈ ವಿಚಾರವನ್ನು ಮೇಲಿನ ಒತ್ತುವರಿ ಮಾಡಿಕೊಂಡ ನಿವಾಸಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿರುತ್ತಾರೆ. ಸದ್ಯ ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಸರ್ಕಾರಿ ಭೂಮಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿರುತ್ತಾರೆ.
ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಸಂಪತ್ತು ಲೂಟಿ ಮಾಡಲು ಮೌಲಾಲಿ ಹಾಗೂ ಮಂಜಪ್ಪ ಇವರು ಲಂಚದ ರೂಪದಲ್ಲಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಇವರ ಮೇಲೆ ಆಗಿಂದಾಗ್ಗೆ ಹೇಳಿ ಬರುತ್ತಿದೆ. ಇವರ ಕೃಪಾಕಟಾಕ್ಷದಿಂದ ಅರಣ್ಯ ಭೂಮಿಯಲ್ಲಿ ಕಲ್ಲು ಕೋರೆಗಳು ಸಹ ನಡೆಯುತ್ತಿವೆ. ಇದರ ಜೊತೆಗೆ ಸರ್ಕಾರಿ ಕಂದಾಯ ಭೂಮಿಯಲ್ಲಿ ಬೆಳೆದಿರುವ ಬೃಹತ್ ಗಾತ್ರದ ಅಪಾರ ಬೆಲೆ ಬಾಳುವ ಮರಗಳನ್ನು ಕಡಿತಲೆ ಮಾಡಲು ಬಿಟ್ಟಿರುತ್ತಾರೆ.
ಮಾನ್ಯ ಶಿವಮೊಗ್ಗ ಜಿಲ್ಲೆಯ ಲೋಕಾಯುಕ್ತರು ಕೂಡಲೇ ಸರ್ವೇ ನಂಬರ್ 78 ಹಾಗೂ 81 ರಲ್ಲಿ ಸರ್ಕಾರಿ ಕಂದಾಯ ಭೂಮಿಯಲ್ಲಿ ಬೆಳೆದಿರುವ ಅಪಾರ ಪ್ರಮಾಣದ ಬೃಹತ್ ಗಾತ್ರದ ಮರ ಕಡಿತಲೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮೌಲಾಲಿ ಹಾಗೂ ಮಂಜಪ್ಪ ಇವರ ಮೇಲೆ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಮೌಲಾಲಿ ಹಾಗೂ ಮಂಜಪ್ಪ ಇವರು ಪ್ರಮುಖ ಪಕ್ಷದ ರಾಜಕಾರಣಿಯ ಸಹಕಾರದೊಂದಿಗೆ ತ್ಯಾಗರ್ತಿ ಅರಣ್ಯ ವ್ಯಾಪ್ತಿಯಲ್ಲಿರುವ ಅಪಾರ ಪ್ರಮಾಣದ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಬೃಹತ್ ಗಾತ್ರದ ಮರಗಳ ಮಾರಣಹೋಮ ನಡೆಯುತ್ತಿದ್ದರು ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ತ್ಯಾಗರ್ತಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೌಲಾಲಿ ಇವರು ಈಗಾಗಲೇ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಸಂಪಾದಿಸಿರುವ ಆರೋಪವು ಇವರ ಮೇಲೆ ಕೇಳಿ ಬಂದಿದೆ. ಇವರು ತಮ್ಮ ವ್ಯಾಪ್ತಿ ಸ್ಥಳದಲ್ಲಿ ಇರದೇ ಹೆಚ್ಚಿನ ಸಮಯ ಮನೆಯಲ್ಲೇ ಇರುತ್ತಾರೆ ಎಂಬ ಮತ್ತೊಂದು ಆರೋಪವು ಇವರ ಮೇಲಿದೆ. ಮಂಜಪ್ಪ ಇವರು ಅರಣ್ಯ ಭೂಮಿಯಲ್ಲಿ ಕಲ್ಲು ಕೋರೆಯನ್ನು ನಡೆಸಿಕೊಂಡು ಹೋಗುವ ಮಾಲೀಕರಿಗೆ ರಕ್ಷಕರಾಗಿ ಕಾವಲು ಕಾಯುತ್ತಾರೆ. ಅಪಾರ ಪ್ರಮಾಣದ ಬೆಲೆಬಾಳುವ ಅರಣ್ಯವನ್ನು ಲೂಟಿ ಮಾಡಲು ರೂಟ್ ಮ್ಯಾಪ್ ಇವರೇ ಹಾಕಿ ಕೊಡುತ್ತಾರೆ. ಇವರಿಬ್ಬರಿಂದಲೇ ತ್ಯಾಗರ್ತಿ ವಲಯ ವ್ಯಾಪ್ತಿಯಲ್ಲಿ ಅರಣ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಚ್ಚ ಹಸಿರಿನ ಭೂಮಿ ಇವರಿಂದ ಬರಡು ಭೂಮಿಯಾಗಿದೆ.
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರೇ ಹಿರೇಬಿಲಗುಂಜಿ ಪಂಚಾಯತಿ ವ್ಯಾಪ್ತಿಯ ಮಳ್ಳ ಗ್ರಾಮದ ಸರ್ಕಾರಿ ಕಂದಾಯ ಭೂಮಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಕೃಪಾಕಟಾಕ್ಷದಿಂದ ಬೃಹತ್ ಗಾತ್ರದ ಮರಗಳ ಮಾರಣ ಹೋಮಕ್ಕೆ ಸಂಬಂಧಿಸಿದಂತೆ ತಾವು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಬೇಕಾಗಿದೆ. ಆ ಮೂಲಕ ಉಳಿದಿರುವ ಅಲ್ಪಸ್ವಲ್ಪ ಅರಣ್ಯ ಸಂಪತ್ತನ್ನು ಉಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಆ ನಿಟ್ಟಿನಲ್ಲಿ ಕೂಡಲೇ ಕಾರ್ಯಾಪವರ್ತರಾಗಿ ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.
ಮಂದಾರ ನ್ಯೂಸ್ ಸುದ್ದಿ ವಾಹಿನಿ ಮೌಲಾಲಿ ಹಾಗೂ ಮಂಜಪ್ಪ ಇವರ ವಿರುದ್ಧ ಶಿವಮೊಗ್ಗ ಜಿಲ್ಲಾ ಲೋಕಾಯುಕ್ತರಿಗೆ ಕೂಡಲೇ ದೂರು ದಾಖಲಿಸಲಿದೆ.
ಈಗಾಗಲೇ ಇವರಿಂದ ಎಷ್ಟು ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗಿದೆ ಹಾಗೂ ಅರಣ್ಯ ಭೂಮಿಯಲ್ಲಿ ಎಷ್ಟು ಕಲ್ಲು ಕೋರೆಗಳು ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಇವರು ಎಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಯಾರ್ಯಾರ ಮೇಲೆ ಇದುವರೆಗೆ ಎಷ್ಟು ಎಫ್ಐಆರ್ ದಾಖಲಿಸಿದ್ದಾರೆ. ಇವರಿಂದ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ. ಯಾವ ಪ್ರಮಾಣದಲ್ಲಿ ನಷ್ಟವಾಗಿದೆ. ಇವರಿಂದ ಯಾವ ಪ್ರಮಾಣದಲ್ಲಿ ಕರ್ತವ್ಯ ಲೋಪವಾಗಿದೆ. ಈ ಎಲ್ಲಾ ಮಾಹಿತಿಗಳನ್ನು ಲೋಕಾಯುಕ್ತರು ಪಡೆದು ತನಿಖೆಗೆ ಒಳಪಡಿಸಬೇಕು ಆಗ ಸತ್ಯ ಹೊರಬರುತ್ತದೆ. ಲೋಕಾಯುಕ್ತ ತನಿಖೆ ಆಗುವವರೆಗೂ ನಮ್ಮ ಬರಹದ ಯುದ್ಧ ನಿರಂತರವಾಗಿ ಸಾಗುತ್ತದೆ.
0 Comments