ಮಂದಾರ ನ್ಯೂಸ್: ಭಕ್ತರು ಹಾಗೂ ಊರಿನ ಗ್ರಾಮಸ್ಥರ ಸಹಕಾರ ಇದ್ದರೆ ಎಂತಹ ಮಹತ್ಕಾರ್ಯಗಳನ್ನು ಸಹ ನಾವು ಅಂದುಕೊಂಡ ಸಮಯದ ಒಳಗೆ ಮಾಡಿ ಮುಗಿಸಲು ಸಾಧ್ಯವಾಗುತ್ತದೆ. ಅವರ ಸಹಕಾರವಿಲ್ಲದೆ ಯಾವ ಕಾರ್ಯಗಳು ಸಾಕಾರಗೊಳ್ಳಲು ಸಾಧ್ಯವಿಲ್ಲ ಎಂಬುವುದನ್ನು ತ್ಯಾಗರ್ತಿ ಗ್ರಾಮದ ಶ್ರೀ ಮಾರಿಕಾಂಬಾ ದೇವಿಯ ಸಮಸ್ತ ಭಕ್ತರು ಹಾಗೂ ಊರಿನ ಗ್ರಾಮಸ್ಥರು ಮಾಡಿ ತೋರಿಸಿದ್ದಾರೆ.
2015ರಲ್ಲಿ ತ್ಯಾಗರ್ತಿ ಶ್ರೀ ಮಾರಿಕಾಂಬ ದೇವಸ್ಥಾನದ ಹಳೆಯ ಕಟ್ಟಡವನ್ನು ಕೆಡವಲಾಯಿತು. ಅದೇ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡುವ ತೀರ್ಮಾನಕ್ಕೆ ಅಂದಿನ ಕೆಲವು ಮಾರಿಕಾಂಬ ಸಮಿತಿಯವರು ಗ್ರಾಮದ ಕೆಲವು ಮುಖಂಡರ ಸಮ್ಮುಖದಲ್ಲಿ ತೀರ್ಮಾನ ಮಾಡಿದರು. ಅವರು ತೀರ್ಮಾನಿಸಿದಂತೆ 2015ರ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ನಂತರ ದೇವಿಯ ಹಳೆಯ ಕಟ್ಟಡವನ್ನು ಕೇರಳದ ಅಷ್ಟಮಂಗಳ ಪರಿಣತರ ಸಲಹೆಯಂತೆ ಕೆಡವಿದರು.
2020ರ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ಒಳಗೆ ದೇವಿಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಗುವುದು ಎಂಬ ನಿರ್ಧಾರದೊಂದಿಗೆ ಅಂದು(2015)ರಲ್ಲಿ ಹಳೆ ಕಟ್ಟಡವನ್ನು ಕೆಡವಿದರು. ಸರಿ ಸುಮಾರು 150 ಕೋಟಿ ವೆಚ್ಚದಲ್ಲಿ ನೂತನ ಶ್ರೀ ಮಾರಿಕಾಂಬಾ ದೇವಿಯ ಕಟ್ಟಡ ನಿರ್ಮಾಣ ಮಾಡುವುದು ಅದಕ್ಕೆ ತಗಲುವ ಖರ್ಚು -ವೆಚ್ಚವನ್ನು ಗ್ರಾಮದ ಪ್ರತಿ ಮನೆಗೆ 6000 ಯಂತೆ ದೇಣಿಗೆ ಸಂಗ್ರಹಿಸುವುದು, ನಂತರ ಅಕ್ಕ- ಪಕ್ಕದ ಗ್ರಾಮದ ಹಾಗೂ ಪರ ಊರಿನಲ್ಲಿರುವ ದೇವಿಯ ಭಕ್ತರಿಂದ ದೇಣಿಗೆ ಸಂಗ್ರಹಿಸಿ ನೂತನ ಕಟ್ಟಡ ನಿರ್ಮಾಣ ಮಾಡುವುದು ಎಂಬ ತೀರ್ಮಾನ ಬರಲಾಯಿತು.
2020ರ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯ ಸಂದರ್ಭದಲ್ಲಿ ಮಾರಿಕಾಂಬಾ ದೇವಿಯ ನೂತನ ಕಟ್ಟಡ ನಿರ್ಮಾಣ ಹಂತದಲ್ಲೇ ಇತ್ತು. ಇನ್ನು ಕೆಲಸ- ಕಾರ್ಯಗಳು ಮುಗಿಯದ ಕಾರಣ ಲೋಕಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ.
2020ರ ಜಾತ್ರೆ ನಂತರ ಒಂದು ದಿನ ಕೆಲವು ಗ್ರಾಮಸ್ಥರ ಹಾಗೂ ಮುಖಂಡರ ಸಮ್ಮುಖದಲ್ಲಿ ಮಾರಿಕಾಂಬ ಸಮಿತಿಯವರು ಒಂದು ಸಭೆಯನ್ನು ನಡೆಸಿದರು. ಅಂದಿನ ತೀರ್ಮಾನದಂತೆ ಇನ್ನು ನಾಲ್ಕು ತಿಂಗಳಲ್ಲಿ ದೇವಸ್ಥಾನವನ್ನು ಪೂರ್ಣಗೊಳಿಸಿ ಲೋಕಾಪಣೆ ಮಾಡಲಾಗುವುದು ಎಂಬ ವಿಚಾರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಮಂಡಿಸಿದರು.
ಆದರೆ ಮಾರಿಕಾಂಬ ಸಮಿತಿಯವರು ದೇವಿಯ ಭಕ್ತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನಾಲ್ಕು ತಿಂಗಳಲ್ಲಿ ದೇವಸ್ಥಾನವನ್ನು ಮುಗಿಸುವ ಭರವಸೆ ಉಳಿಸಿಕೊಳ್ಳಲಿಲ್ಲ. ಅವರ ಮಾತು ಭರವಸೆಗೆ ಮಾತ್ರ ಸೀಮಿತವಾಯಿತು.ದೇವಿಯ ದೇವಸ್ಥಾನವನ್ನು ಮುಗಿಸುವ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಲೇ ಇಲ್ಲ.
ಮಾರಿಕಾಂಬಾ ದೇವಸ್ಥಾನದ ನೂತನ ಕಟ್ಟಡವನ್ನು ನಿರ್ಮಾಣ ಮಾಡಿ, ಲೋಕಾರ್ಪಣೆ ಮಾಡಲೇಬೇಕು ದೇವಿಯ ಭಕ್ತರಿಗೆ ನೀಡಿದ ವಾಗ್ದಾನವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಊರಿನಲ್ಲಿರುವ ಸರ್ಕಾರಿ ಕೆರೆ ಜಾಗದಲ್ಲಿ ಕಲ್ಲು ಕೋರೆಗಳನ್ನು ನಡೆಸಿಕೊಂಡು ಹೋಗಲು ಅಂದಿನ ಮಾರಿಕಾಂಬಾ ಸಮಿತಿಯವರು ತೀರ್ಮಾನಿಸಿದರು. ಇದಕ್ಕೆ ಗ್ರಾಮದ ಕೆಲವು ಪ್ರಜ್ಞಾವಂತ ನಾಗರಿಕರ ವಿರೋಧವು ಇತ್ತು. ಆದರೆ ಅವರ ವಿರೋಧವನ್ನು ನಿರ್ಲಕ್ಷಿಸಿ. ಕಲ್ಲು ಕೋರೆ ಮಾಲೀಕರಿಗೆ ಇಂತಿಷ್ಟು ದೇವಸ್ಥಾನ ನಿರ್ಮಾಣಕ್ಕೆ ಹಣ ನೀಡಬೇಕು ಹಾಗೂ ಕೆರೆ ಜಾಗದಲ್ಲಿ ಕಲ್ಲು ಕೋರೆಗಳನ್ನು ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಸರ್ಕಾರಿ ಕೆರೆ ಜಾಗದಲ್ಲಿ ಕಲ್ಲು ಕೋರೆ ನಡೆಸಲು ಅನುಮತಿ ನೀಡಿದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ದೇವಸ್ಥಾನದ ನೂತನ ಕಟ್ಟಡದ ನಿರ್ಮಾಣ ಕಾರ್ಯ ವೇಗವಾಗಿ ಸಾಗಲೇ ಇಲ್ಲ. ಊರಿನ ಗ್ರಾಮಸ್ಥರಿಂದ ಹಣ ಸಂಗ್ರಹಣೆ, ದೇವಸ್ಥಾನಕ್ಕೆ ಸಂಬಂಧಿಸಿದ ಆಸ್ತಿಗಳ ಮಾರಾಟ, ಸರ್ಕಾರಿ ಕೆರೆ ಜಾಗದಲ್ಲಿ ಕಲ್ಲು ಕೋರೆಗಳಿಗೆ ಅನುಮತಿ. ಇಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದರು ಮಾರಿಕಾಂಬ ದೇವಿಯ ದೇವಸ್ಥಾನ ಮುಗಿಯುವ ಲಕ್ಷಣ ಕಾಣಲೇ ಇಲ್ಲ.
"ದೇವಸ್ಥಾನ ಲೋಕಾರ್ಪಣೆಗೆ ಕಾರಣರಾದ ಭಕ್ತರು ಹಾಗೂ ಊರಿನ ಗ್ರಾಮಸ್ಥರು".
ಕೊನೆಗೂ ಊರಿನ ಗ್ರಾಮಸ್ಥರು ಹಾಗೂ ಸಮಸ್ತ ಭಕ್ತರು ಒಂದು ತೀರ್ಮಾನಕ್ಕೆ ಬಂದು ನೆನೆಗುದ್ದಿಗೆ ಬಿದ್ದಿರುವ ದೇವಸ್ಥಾನದ ನಿರ್ಮಾಣ ಕಾರ್ಯ ಮುಂದುವರಿಯಬೇಕು. 2025ರ ಜಾತ್ರೆಯ ಒಳಗೆ ದೇವಸ್ಥಾನ ಲೋಕಾರ್ಪಣೆ ಗೊಳ್ಳಲೇಬೇಕು ಎಂಬ ದೃಢವಾದ ತೀರ್ಮಾನಕ್ಕೆ ಬಂದರು.
ಸಮಸ್ತ ದೇವಿಯ ಭಕ್ತರು ಹಾಗೂ ಊರಿನ ಗ್ರಾಮಸ್ಥರು 2025ರ ಜಾತ್ರೆಯ ಒಳಗೆ ನೂತನ ಶ್ರೀ ಮಾರಿಕಾಂಬಾ ದೇವಿಯ ಕಟ್ಟಡ ಲೋಕಾರ್ಪಣೆಗೊಳಿಸಲೇಬೇಕು ಎಂಬ ದೃಢವಾದ ತೀರ್ಮಾನಕ್ಕೆ ಬಂದ ಕಾರಣ ಮತ್ತೆ ಮಾರಿಕಾಂಬಾ ದೇವಿಯ ಸಮಸ್ತ ಭಕ್ತರು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಲು ಮುಂದೆ ಬಂದರು.
ಸಮಸ್ತ ಭಕ್ತರನ್ನು ರಕ್ಷಣೆ ಮಾಡಿ ,ಭಕ್ತರನ್ನು ಆಶೀರ್ವದಿಸಬೇಕಾದ ತಾಯಿ ಯಾವುದೋ ಕಟ್ಟಡದಲ್ಲಿ ಇದ್ದರೆ ಊರು ಹೇಗೆ ಉದ್ಧಾರವಾಗಲು ಸಾಧ್ಯ? ದೇವಿಗೆ ಒಂದು ನೆಲೆಯನ್ನು ಕಲ್ಪಿಸಿದರೆ ಮಾತ್ರ ಊರಿನಲ್ಲಿ ಸುಖ,ಶಾಂತಿ, ಸಮೃದ್ಧಿಯಿಂದ ಇರಲು ಸಾಧ್ಯ ಎಂಬ ತೀರ್ಮಾನಕ್ಕೆ ಬಂದು, ತಮ್ಮ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಅದನ್ನೆಲ್ಲವನ್ನು ಮರೆತು. ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಮತ್ತೊಮ್ಮೆ ದೇಣಿಗೆಯನ್ನು ನೀಡಲು ತಾ ಮುಂದು, ನಾ ಮುಂದು ಎಂದು ಬಂದರು.ಅವರ ಭಕ್ತಿ ನಿಜವಾಗಿಯೂ ಆ ದೇವಿಗೆ ಸಮರ್ಪಣೆಯಾಗಿದೆ.
ಭಕ್ತರು ಹಾಗೂ ಊರಿನ ಗ್ರಾಮಸ್ಥರು ಯಾವ ಪರಿಯಲ್ಲಿ ಮುಂದೆ ಬಂದರು ಎಂದರೆ... ಹತ್ತು ವರ್ಷದಿಂದ ಮಾಡಲು ಸಾಧ್ಯವಾದ್ದುದನ್ನು ಕೇವಲ ನಾಲ್ಕೇ ತಿಂಗಳಲ್ಲಿ ಮಾಡಿ ತೋರಿಸಿದರು. ಎಷ್ಟೇ ಕೋಟಿ ವೆಚ್ಚದ ದೇವಸ್ಥಾನ ನಿರ್ಮಾಣ ಕಾರ್ಯವಿದ್ದರೂ ಅದನ್ನು ಸಮಸ್ತ ದೇವಿಯ ಭಕ್ತರು ಹಾಗೂ ಊರಿನ ಗ್ರಾಮಸ್ಥರು ಮಾಡುತ್ತೇವೆ ಎನ್ನುವ ಮಟ್ಟಕ್ಕೆ ಬಂದು ನಿಂತರು. ಇದೆ ಅಲ್ಲವೇ ಸಮಸ್ತ ಭಕ್ತರ ಹಾಗೂ ಊರಿನ ಗ್ರಾಮಸ್ಥರ ಸಾಧನೆ ಎನ್ನುವುದು. "ಕೊಟ್ಟಿದ್ದು ತಾಯಿ, ಕೊಡಬೇಕಾಗಿದ್ದು ತಾಯಿ, ಮುಂದೆ ನಮಗೆ ಕೊಟ್ಟೆ ಕೊಡುತ್ತಾಳೆ". ಅವಳ ಆಶೀರ್ವಾದ ಇದ್ದರೆ, ತಾಯಿಗೆ ಕೊಟ್ಟಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಸಂಪಾದಿಸುತ್ತೇವೆ ಎನ್ನುವ ರೀತಿಯಲ್ಲಿ ಆ ದೇವಿಗೆ ಭಕ್ತಿಯನ್ನ ಸಮರ್ಪಿಸಿದರು ಭಕ್ತರು ಹಾಗೂ ಊರಿನ ಗ್ರಾಮಸ್ಥರು.
ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ದೇವಿಯ ಸಮಸ್ತ ಭಕ್ತರು ಹಾಗೂ ಊರಿನ ಗ್ರಾಮಸ್ಥರು ಸಾವಿರದಿಂದ ಲಕ್ಷ, ಲಕ್ಷ ರೂಪದಲ್ಲಿ ದೇಣಿಗೆಯನ್ನು ಮತ್ತೊಮ್ಮೆ ನೀಡತೊಡಗಿದರು. ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹವಾಯಿತು. 2025 ರ ಮಾರಿಕಾಂಬ ಜಾತ್ರೆಯ ಒಳಗೆ ಶ್ರೀ ಮಾರಿಕಾಂಬ ಹಾಗೂ ದುರ್ಗಾಂಬಾ ದೇವರ ದೇವಸ್ಥಾನ ಲೋಕಾರ್ಪಣೆಗೊಳ್ಳಲು ಸಾಧ್ಯವಾಯಿತು.
ಇಂದು ತ್ಯಾಗರ್ತಿಯಲ್ಲಿ ಶ್ರೀ ಮಾರಿಕಾಂಬ ಹಾಗೂ ದುರ್ಗಾಂಬಾ ದೇವಸ್ಥಾನ ನಿರ್ಮಾಣವಾಗಿ, ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದರೆ ಅದು ಸಮಸ್ತ ದೇವಿಯ ಭಕ್ತರ ಹಾಗೂ ಊರಿನ ಗ್ರಾಮಸ್ಥರ ಸಹಕಾರದೊಂದಿಗೆ ಎಂಬುದನ್ನು ಯಾರು ಮರೆಯಬಾರದು.
ತ್ಯಾಗರ್ತಿ ಗ್ರಾಮದ ಹಾಗೂ ದೇವಿಯ ಸಮಸ್ತ ಭಕ್ತರು ದೇವಸ್ಥಾನ ನಿರ್ಮಾಣ ಮಾಡುವ ಇತರ ಭಕ್ತರಿಗೆ ಮಾದರಿಯಾದರು. ಭಕ್ತರು ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಎಂಬುದನ್ನ ತೋರಿಸಿಕೊಟ್ಟರು.
ಇಂದು ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆಗೆ ಕಾರಣರಾದರು.
ಬಡವ -ಬಲಿದ, ದೀನಾ -ದಲಿತ ಎನ್ನದೆ ಜಾತಿ, ಮತ, ಪಂಥವನ್ನು ಬದಿಗಿಟ್ಟು ಇಂದು ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವನ್ನು ಲೋಕಾರ್ಪಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲಸವನ್ನು ಮಾಡುತ್ತಿದ್ದಾರೆ.
ದೇವಸ್ಥಾನ ನಿರ್ಮಾಣ ಹಾಗೂ ಲೋಕಾರ್ಪಣೆಗೆ ಕಾರಣರಾದ ದೇವಿಯ ಸಮಸ್ತ ಭಕ್ತರಿಗೂ ಹಾಗೂ ತ್ಯಾಗರ್ತಿ ಗ್ರಾಮದ ಊರಿನ ಸಮಸ್ತ ನಾಗರಿಕರಿಗೂ ನಮ್ಮ ಮಂದಾರ ಪತ್ರಿಕಾ ಬಳಗದ ವತಿಯಿಂದ ತುಂಬು ಹೃದಯದ ಧನ್ಯವಾದಗಳು..
0 Comments