ಮಂದಾರ ನ್ಯೂಸ್ : ನಾಳೆಯಿಂದ ಹರಿಹರ ನಗರದ ಗ್ರಾಮ ದೇವತೆ ಊರಮ್ಮ ದೇವಿಯ ಜಾತ್ರೆ ಆರಂಭವಾಗಲಿದೆ. ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಹರಿಹರ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲಿ ನೋಡಿದರಲ್ಲಿ ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನಗಳನ್ನು ತಣಿಸುತ್ತಿದೆ.
ಮಲೆನಾಡಿನ ತುಂಗಭದ್ರಾ ನದಿ ತೀರದಲ್ಲಿ ಬಡಿಗೇರ ವ್ಯಕ್ತಿ ಯೊಬ್ಬ ಕಟ್ಟಿಗೆಯಿಂದ ಸೃಷ್ಠಿಸಿದ ಎರಡು ದೇವತೆಗಳುಳ್ಳ ಪೆಟ್ಟಿಗೆಯೊಂದು ತುಂಗಭದ್ರಾ ನದಿಯಲ್ಲಿ ತೇಲುತ್ತಾ ಬಂದು ಗರ್ಭಗುಡಿ ಗ್ರಾಮದ ನದಿ ತಟದಲ್ಲಿ ನಿಂತಾಗ ಬಡಿಗೇರ ವ್ಯಕ್ತಿ ಮೀನುಗಾರರ ಸಹಾಯದಿಂದ ದಡಕ್ಕೆ ತರುತ್ತಾನೆ. ನಂತರ ದನ ಕಾಯುವ ಹುಡುಗನ ಮೈಯಲ್ಲಿ ದೇವಿ ಮೈದುಂಬಿ ತನ್ನ ಇತಿಹಾಸ ತಿಳಿಸುತ್ತಾಳೆ.
ಆಗ ಗರ್ಭಗುಡಿ ಗ್ರಾಮದಲ್ಲಿ ಮೊದಲನೆ ಪೂಜೆ ನಡೆಯುತ್ತದೆ, ಆದ್ದರಿಂದ ಗರ್ಭಗುಡಿ ಗ್ರಾಮವೇ ದೇವಿಯ ತವರು ಮನೆ ಎಂದು ಹಿರಿಯರ ಹೇಳಿಕೆಯಾಗಿದೆ.
ಗರ್ಭಗುಡಿ ಗ್ರಾಮದಿಂದ ದೇವಿಮೂರ್ತಿಯುಳ್ಳ ಪೆಟ್ಟಿಗೆ ಕಳ್ಳತನವಾಗಿ, ದಾವಣಗೆರೆ ತಾಲೂಕಿನ ಮಾಗನಹಳ್ಳಿ ಮತ್ತು ಬೇತೂರು ಸಮೀಪದ ಗಡಿ ಬೇವಿನಮರದ ಸ್ಥಳದಲ್ಲಿ ತಂದು ಬಿಡುತ್ತಾರೆ.ಆಗ ಮಾಗನಹಳ್ಳಿ ಮತ್ತು ಬೇತೂರು ಗ್ರಾಮದವರು ಇದು ನಮ್ಮದೆಂದು ವ್ಯಾಜ್ಯ ಮಾಡಿದಾಗ ಬಾಲಕನೊಬ್ಬ ಮೈಯಲ್ಲಿ ಅವತರಿಸಿದ ದೇವಿ ನಾನು ಗರ್ಭಗುಡಿ ಗ್ರಾಮದ ಮಗಳೆಂದು ಹೇಳುತ್ತಾಳೆ ನಂತರ ಮಾಗನಹಳ್ಳಿಯವರು, ಗರ್ಭಗುಡಿಯವರು ಇತರರು ನಮಗೆ ಸೇರಿದ ದೇವಿ ಎಂದು ವಾದ ಮಾಡುತ್ತಿರುವಾಗ ಅಂತಮವಾಗಿ ನಾನು ಎಲ್ಲಿಯೂ ಇರುವುದಿಲ್ಲ "66 ಹಳ್ಳಿಗಳ ಒಡತಿ" ನನ್ನ ಕರೆದು ಎಲ್ಲರೂ ಪೂಜೆ ಪುನಸ್ಕಾರ ಮಾಡಿರೆಂದು ಹೇಳುತ್ತಾಳೆ, ಅಲ್ಲಿಂದ ಇಲ್ಲಿಯವರೆಗೂ ಯಾವ ವಾಹನವಿಲ್ಲದೆ ತಲೆಯ ಮೇಲೆ ಹೊತ್ತು ದೇವಿಯನ್ನು ನಡೆದುಕೊಂಡೆ ಊರಿಂದೂರಿಗೆ ಹೋಗುವ ದೇವಿಯಾಗಿದ್ದಾಳೆ. ಹೀಗೆ ಜನಪದ ಕಥೆಯನ್ನು ದೇವಿಯ ಭಕ್ತರು ಎನ್ನುವವರು ಹೇಳುತ್ತಾ ಹೋಗುತ್ತಾರೆ.
ಮಾಗಾನಹಳ್ಳಿ ಗ್ರಾಮದಿಂದ ಹಲುವಾಗಲು ಬಳಿ ಇರುವ ಗರ್ಭಗುಡಿ ಗ್ರಾಮದವರೆಗೆ 66 ಹಳ್ಳಿಗಳಲ್ಲಿ ಈ ದೇವಿಯ ಭಕ್ತರಿದ್ದಾರೆ. ಗರ್ಭಗುಡಿ ದೇವಿಯ ತವರು ಮನೆಯಾದರೆ, ಹರಿಹರ ಗಂಡನ ಮನೆ ಎನಿಸಿಕೊಂಡಿದೆ.
ಇಂತಹ ಜನಪದ ಇತಿಹಾಸ ಹೊಂದಿರುವ ಊರಮ್ಮದೇವಿ ಜಾತ್ರೆಯನ್ನು ಹರಿಹರ ನಗರದಲ್ಲಿ ಮಾ.18 ರಿಂದ 22 ರವರೆಗೆ ಅದ್ದೂರಿಯಾಗಿ ನಡೆಯಲಿದೆ.
ಈಗಾಗಲೇ ಊರಮ್ಮ ದೇವಿ ಜಾತ್ರಾ ಸಮಿತಿಯವರು ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿದ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಊರಮ್ಮ ದೇವಿಯ ಜಾತ್ರೆಗಾಗಿ ಸರಿಸುಮಾರು ಐದರಿಂದ ಆರು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆಯಾ ಕಟ್ಟಿನ ಜಾಗದಲ್ಲಿ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಇದಕ್ಕಾಗಿ ಪೊಲೀಸ್ ಇಲಾಖೆ ವಿಶೇಷ ಕೌಂಟರ್ ಒಂದನ್ನು ತೆರೆದಿದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಊರಮ್ಮ ದೇವಿಯ ಜಾತ್ರೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಎಲ್ಲರೂ ಸೌಹಾರ್ದತೆಯಿಂದ ಆಚರಿಸೋಣ. ಜಾತ್ರೆಯ ಯಶಸ್ವಿಗೆ ಎಲ್ಲರೂ ಕೈಜೋಡಿಸೋಣ. ಊರಮ್ಮ ದೇವಿಯ ಕೃಪೆಗೆ ಪಾತ್ರರಾಗೋಣ.
ಅವರವರ ನಂಬಿಕೆ, ಭಕ್ತಿಯಂತೆ ಹಬ್ಬವನ್ನು ಆಚರಣೆ ಮಾಡಲು ಎಲ್ಲರೂ ಸಹಕರಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಎಲ್ಲರೂ ಕಾರಣರಾಗುವ ಮೂಲಕ ಹರಿಹರದ ಹಿರಿಮೆಯನ್ನು ಸಾರೋಣ.
ಮಂದಾರ ನ್ಯೂಸ್ ಪತ್ರಿಕಾ ಬಳಗದ ವತಿಯಿಂದ🙏
ಹರಿಹರದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆಗಮಿಸುವ ಸರ್ವ ಭಕ್ತಾದಿಗಳಿಗೆ ಆದರದ ಸ್ವಾಗತ.
0 Comments