ದಂಡಾಧಿಕಾರಿಗಳ ಎಚ್ಚರಿಕೆಯ ನಡುವೆ, ಸದ್ದಿಲ್ಲದೆ ಆರಂಭವಾದ ಅಕ್ಕಿ ಧಂದೆ.!?


ಮಂದಾರ ನ್ಯೂಸ್: ಯಾರೇ ಕೂಗಾಡಲಿ, ದಂಡಾಧಿಕಾರಿಗಳು ಅದೆಷ್ಟೇ ಬಾರಿ ಎಚ್ಚರಿಕೆ ನೀಡಲಿ, ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಲಿ, ಆಹಾರ ಇಲಾಖೆ ನಮ್ಮ ಬೆನ್ನ ಹಿಂದೆ ಬೀಳಲಿ,ಪೋಲಿಸ್ ಇಲಾಖೆ ನಮ್ಮ ಮೇಲೆ ಎಷ್ಟೇ ದೂರು ದಾಖಲಿಸಿಕೊಳ್ಳಲಿ, ನಾವು ಮಾತ್ರ ನಮ್ಮ ದಂಧೆಯನ್ನು ನಿಲ್ಲಿಸುವುದಿಲ್ಲ .ಎನ್ನುವಷ್ಟರ ಮಟ್ಟಿಗೆ ಹರಿಹರದಲ್ಲಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡುವ ದಂಧೆಕೋರರು ಇಡೀ ವ್ಯವಸ್ಥೆಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಈ ರೀತಿ ಇವರು ಬೆಳೆಯಲು ನೇರ ಕಾರಣ ಈ ಮೇಲಿನ ಇಲಾಖೆಯವರು ಎಂದರು ತಪ್ಪಾಗಲಾರದು.

ಕಳೆದ ಎರಡು ತಿಂಗಳ ಹಿಂದೆ ಹರಿಹರದ ತಾಲೂಕು ದಂಡಾಧಿಕಾರಿಗಳು ಕಾಳ ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡುವ ದಂಧೆಕೋರರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಎಲ್ಲರಿಗೂ ನೇರವಾದ ಎಚ್ಚರಿಕೆಯನ್ನು ನೀಡಿದ್ದರು. ಮುಂದಿನ ದಿನದಲ್ಲಿ ತಾವು ಅನ್ನಭಾಗ್ಯ ಅಕ್ಕಿ ಖರೀದಿ ಮಾಡಿ ಸಿಕ್ಕಿ ಬಿದ್ದರೆ ನಿಮ್ಮನ್ನು ತಾಲ್ಲೂಕಿನಿಂದ ಗಡಿಪಾರು ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಅಕ್ಕಿ ಖರೀದಿ ಮಾಡುವ ದಂಧೆ ಕೋರರು ದಂಡಾಧಿಕಾರಿಗಳ ಮಾತಿಗೆ ತಲೆಕೆಡಿಸಿಕೊಳ್ಳಲಿಲ್ಲ. ಅವರು ಎಚ್ಚರಿಕೆ ನೀಡಿದ 24 ಗಂಟೆಯಲ್ಲೇ ಮತ್ತೆ ತಮ್ಮ ಹಳೆ ಜಾಳಿಯನ್ನು ಆರಂಭಿಸಿದರು.
ಇದೀಗ ಸದ್ದಿಲ್ಲದಂತೆ ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡುವ ದಂಧೆಕೋರರ ಸಂಖ್ಯೆ ಹೆಚ್ಚಾಯಿತು. ಅವರುಗಳ ನಡುವೆ ಪೈಪೋಟಿ ಬಿದ್ದಿತ್ತು. ಇವರ ಪೈಪೋಟಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿತು. ಹಿಂದೆ ಶತ್ರುವಾಗಿದ್ದವರು ಇಂದು ಮಿತ್ರರಾದರು. ಹಿಂದೆ ಮಿತ್ರರಾದವರು ಇಂದು ಶತ್ರುಗಳಾದರು. ಒಬ್ಬರಿಗೊಬ್ಬರು ಕೈ ,ಕೈ ಮಿಲಾಯಿಸಿ ಹಾದಿ- ಬೀದಿಯಲ್ಲಿ ಹೊಡೆದಾಡಿಕೊಂಡವರು ಇಂದು ಒಂದಾಗಿ ಅಕ್ಕಿ ಖರೀದಿ ಮಾಡುವ ದಂಡೆಕೋರರಾದರು. ಈ ಹಿಂದೆ ಹೆಗಲು ಮೇಲೆ ಕೈಹಾಕಿ ಒಟ್ಟಿಗೆ ಊಟ ಮಾಡಿದವರು ಈಗ ಕೈ,ಕೈ ಎತ್ತಿ ಹೊಡೆದಾಡುವ ಹಂತಕ್ಕೆ ಬಂದಿದ್ದಾರೆ. 

ಕಾಳ ಸಂತೆಯಲ್ಲಿ ಅಕ್ಕಿ ಖರೀದಿ ಮಾಡುವ ದಂಧೆಕೋರರಿಂದ ಹರಿಹರದಲ್ಲಿ ಮುಂದಿನ ದಿನದಲ್ಲಿ ಕಾನೂನು & ಸುವ್ಯವಸ್ಥೆಗೆ ದಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಇವರಿಂದ ಹರಿಹರದಲ್ಲಿ ಶಾಂತಿ ಭಂಗವಾಗಬಹುದು. ಈಗಾಗಲೇ ಇವರ ಜೊತೆ ದೊಡ್ಡ ಮಾಪಿಯಾದ ಕಿಂಗ್ ಪಿನ್ ಗಳು ಸೇರಿಕೊಂಡಿದ್ದಾರೆ ಎಂಬ ಮಾಹಿತಿಯು ಇದೆ. ಅಕ್ಕಿ ಖರೀದಿ ಮಾಡುವ ನೆಪದಲ್ಲಿ ಕೆಲವರು ಕೆಲವು ಮನೆ ಹಾಗೂ ಕೆಲವು ಪ್ರದೇಶಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಮಾಹಿತಿಯು ಹರಿದಾಡುತ್ತಿದೆ. ಕೆಲವು ಸೂಕ್ಷ್ಮವಾದ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ ಎಂಬ ಗುಮಾನಿಯು ಹರಿದಾಡುತ್ತಿದೆ. ಮುಂದಿನ ದಿನದಲ್ಲಿ ಇವರಿಂದ ಹರಿಹರ ನಗರಕ್ಕೆ ದೊಡ್ಡ ಕಂಟಕ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಈ ದಂಧೆಕೋರರು ದೊಡ್ಡ ತಲೆನೋವುಯಾಗುವ ಸಾಧ್ಯತೆ ಹೆಚ್ಚಾಗಿದೆ. "ಮನೆಗೆ ಬೆಂಕಿ ಬಿದ್ದ ಮೇಲೆ ಬಾವಿ ತೋಡುವಂತಾಗಬಾರದು" ಕೂಡಲೇ ಎಚ್ಚೆತ್ತುಕೊಂಡು ಇವರ ಹೆಡೆಮುಡಿ ಕಟ್ಟಬೇಕಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳೇ ಕೆಲವು ನ್ಯಾಯಬೆಲೆ ಅಂಗಡಿಯವರು ಕಾಳ ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡುವ ದಂಧೆಕೋರರೊಂದಿಗೆ ಕೈಜೋಡಿಸಿದ್ದಾರೆ ಎಂಬ ಮಾಹಿತಿಯು ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿದೆ. ಹುಳುಕು ತುಂಬಿರುವ ಅಕ್ಕಿಯ ಚೀಲವನ್ನು ಪಡಿತರ ಚೀಟಿ ದಾರರಿಗೆ ತೋರಿಸಿ. ಈ ಬಾರಿ ಅನ್ನ ಭಾಗ್ಯ ಅಕ್ಕಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ, ಈ ಅಕ್ಕಿಯನ್ನು ನೀವು ತೆಗೆದುಕೊಂಡು ಹೋಗಿ ಏನು ಮಾಡುತ್ತೀರಾ.! ಸುಮ್ಮನೆ ಹಣವನ್ನು ಪಡೆಯಿರಿ ಎಂದು ಕೆಲವು ನ್ಯಾಯಬೆಲೆ ಅಂಗಡಿಯವರು ಪಡಿತರ ಚೀಟಿದಾರರ ಮನಸ್ಸಿನಲ್ಲಿ ಆಳುವಂತ ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿ, ಅವರಿಗೆ ಹಣದ ಆಮಿಷವನ್ನು ನೀಡಿ, ನ್ಯಾಯಬೆಲೆ ಅಂಗಡಿಯವರು ಪಡಿತರ ಅಕ್ಕಿಯನ್ನು ಸದ್ದಿಲ್ಲದೇ ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ದಂಧೆಕೋರರಿಗೆ ಮಾರುತ್ತಿದ್ದಾರೆ ಎಂಬ ಪ್ರಬಲ ಆರೋಪವು ಸಾರ್ವಜನಿಕರಿಂದ ಕೇಳಿ ಬಂದಿದೆ. ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಆಹಾರ ಇಲಾಖೆಯ ಸಹಯೋಗದೊಂದಿಗೆ ಇಂತಹ ನ್ಯಾಯಬೆಲೆ ಅಂಗಡಿಗಳನ್ನು ಪತ್ತೆ ಹಚ್ಚಿ, ಅವರ ಅಂಗಡಿಯ ಅನುಮತಿಯನ್ನು ರದ್ದುಗೊಳಿಸಬೇಕು. ಆ ಮೂಲಕ ಕೆಲವು ನ್ಯಾಯಬೆಲೆ ಅಂಗಡಿಯವರಿಗೆ ಸ್ಪಷ್ಟವಾದ ಎಚ್ಚರಿಕೆಯನ್ನು ನೀಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ.

ಈಗಾಗಲೇ ಹರಿಹರದಲ್ಲಿ ಅಕ್ಕಿ ಖರೀದಿ ಜೋರಾಗಿ ನಡೆಯುತ್ತಿದೆ. ಈ ತಿಂಗಳಿನಿಂದ ಸರ್ಕಾರ ಹಣ ನೀಡುವ ಬದಲು ಮತ್ತೆ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲು ಮುಂದಾಗಿದೆ. ಇದಕ್ಕಾಗಿ ಕಾಯುತ್ತಿದ್ದ ದಂಧೆಕೋರರು ಪೈಪೋಟಿಗೆ ಬಿದ್ದವರಂತೆ ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ. ಈ ದಂಧೆಕೋರರ ಮಧ್ಯೆ ಹೆಚ್ಚಿನ ಪೈಪೋಟಿ ನಡೆಯುತ್ತಿದ್ದು, ಇವರುಗಳ ನಡುವೆ ಹೊಡೆದಾಟಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ನಗರದ ಹೃದಯ ಭಾಗದಲ್ಲಿ ಹೊಡೆದಾಟಗಳು ನಡೆದ ಉದಾಹರಣೆಗಳು ಪೋಲೀಸ್ ಇಲಾಖೆ ಮುಂದೆ ಇದೆ.ಇದರಿಂದ ಮುಂದಿನ ದಿನದಲ್ಲಿ ಹರಿಹರದ ಕಾನೂನು & ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಕೂಡಲೆ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು, ಕಾಳ ಸಂತೆಯಲ್ಲಿ ಅಕ್ಕಿ ಖರೀದಿ ಮಾಡುವ ದಂಧೆಕೋರರ ಮಾಹಿತಿಯನ್ನು ಸಂಗ್ರಹಿಸಿ, ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಅವರನ್ನು ಗಡಿಪಾರು ಮಾಡಬೇಕಾಗಿದೆ. ಆಗ ಮಾತ್ರ ಅಕ್ರಮಕ್ಕೆ ಬ್ರೇಕ್ ಬೀಳಲು ಸಾಧ್ಯ.

Post a Comment

0 Comments