ಇದೆ ದಿನಾಂಕ 18ರಿಂದ 22ರ ವರೆಗೆ ಹರಿಹರ ನಗರದ ಗ್ರಾಮ ದೇವತೆ, ಊರಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು ಇದಕ್ಕಾಗಿ ಹರಿಹರ ನಗರಸಭೆಯಿಂದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ದಾವಣಗೆರೆ ಜಿಲ್ಲಾ ಮಾನ್ಯ ಜಿಲ್ಲಾಧಿಕಾರಿಗಳು ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಹರಿಹರ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ, ಜಾತ್ರೆಯ ಯಶಸ್ವಿಗೆ ಜಾತ್ರಾ ಸಮಿತಿಯವರೊಂದಿಗೆ ಕೈಜೋಡಿಸುವಂತೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಹರಿಹರ ನಗರ ಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಳೆದ ಒಂದು ವಾರದಿಂದ ಹಗಲಿರುಳು ಎನ್ನದೆ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಹಾಗೂ ನಗರ ಪ್ರದೇಶದ ಜನರಿಗೆ ಸೌಲಭ್ಯಗಳನ್ನ ಒದಗಿಸಲು ಎಲ್ಲಾ ಸಿದ್ಧತೆಯನ್ನು ಮಾಡುತ್ತಿದ್ದಾರೆ.
ಇಂದು ಹರಿಹರ ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಮಾರುತಿ ಬೇಡರ್ ಹಾಗೂ ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ವಾಮನ್ ಮೂರ್ತಿಯವರು ಹರಿಹರ ನಗರಕ್ಕೆ ನೀರು ಪೂರೈಕೆ ಮಾಡುವ 20,00 ಎಮ್ .ಎಲ್.ಡಿ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಾತ್ರೆಯ ಸಮಯದಲ್ಲಿ ನಗರ ಪ್ರದೇಶದ ಪ್ರತಿ ವಾರ್ಡಿನ ಜನತೆಗೆ ನೀರಿನ ಸಮಸ್ಯೆ ಆಗದಂತೆ ಮಾನ್ಯ ಅಧ್ಯಕ್ಷರು ಅತ್ಯಂತ ಮುತುವರ್ಜಿಯಿಂದ ಕ್ರಿಯಾಶೀಲರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಈಗಾಗಲೇ ಕಳೆದ ಒಂದು ವಾರದಿಂದ ನಗರದ ಸ್ವಚ್ಛತೆಗೆ ಪ್ರಥಮ ಆದ್ಯತೆಯನ್ನು ನೀಡಿ, ಪ್ರತಿ ವಾಡಿನ ಪ್ರತಿ ಪ್ರದೇಶದ ಚರಂಡಿಗಳನ್ನು ನಗರ ಸಭೆಯ ಪೌರಕಾರ್ಮಿಕರ ಸಹಾಯದಿಂದ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅದರಂತೆ ಬೀದಿ ದೀಪಗಳ ಅಳವಡಿಕೆಗೂ ನಗರಸಭೆಯ ಪೌರಾಯುಕ್ತರಿಗೆ ಸೂಚನೆಯನ್ನ ನೀಡಿ, ಬೀದಿ ದೀಪಗಳನ್ನು ಸಹ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ರಾಣೆಬೆನ್ನೂರು ವಿದ್ಯುತ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಜಾತ್ರೆಯ ಸಂದರ್ಭದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ವಿದ್ಯುತ್ ಒದಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಾನ್ಯ ಅಧ್ಯಕ್ಷರ ಮನವಿಗೆ ಸ್ಪಂದಿಸಿರುವ ರಾಣೇಬೆನ್ನೂರು ವಿದ್ಯುತ್ ಇಲಾಖೆಯ ಅಧಿಕಾರಿಗಳು ಸಮರೋಪಾದಿಯಲ್ಲಿ ವಿದ್ಯುತ್ ಪೂರೈಕೆಗೆ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಶ್ರೀಮತಿ ಮಾರುತಿ ಬೇಡರ್ ಅವರು ಅಧ್ಯಕ್ಷರಾಗಿ ತಮ್ಮ ನಗರ ಪ್ರದೇಶದ ಜನರಿಗೆ ಜಾತ್ರೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪ್ರತಿ ವಾರ್ಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಅಧಿಕಾರಿಗಳಿಂದ ಸಮರ್ಪಕವಾದ ಮಾಹಿತಿಯನ್ನು ಪಡೆಯುತ್ತಿದ್ದು, ನಗರ ಪ್ರದೇಶದ ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಕಚೇರಿಯಲ್ಲಿ ಹಾಗೂ ಫೋನ್ ಸಂಪರ್ಕಕ್ಕೆ ಅವರು ಸಿಗುತ್ತಿದ್ದಾರೆ. ನಗರ ಪ್ರದೇಶದ ಜನರ ಸಮಸ್ಯೆಗೆ ಉತ್ತಮ ರೀತಿಯಲ್ಲಿ ಸ್ಪಂದಿನೆ ನೀಡುತ್ತಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಊರಮ್ಮ ದೇವಿಯ ಜಾತ್ರೆಯ ಯಶಸ್ವಿಗಾಗಿ ಮಾನ್ಯ ಅಧ್ಯಕ್ಷರು ನಗರಸಭೆಯ ಚುನಾಯಿತ ಸದಸ್ಯರ ಸಹಕಾರದೊಂದಿಗೆ ಅವರ ಸಲಹೆ -ಸೂಚನೆಯಂತೆ ತಮ್ಮ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಅಧ್ಯಕ್ಷರ ಕ್ರಿಯಾಶೀಲತೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
0 Comments