ಮಂದಾರ ನ್ಯೂಸ್: ಆಡಳಿತದಲ್ಲಿ ಜನ ಸಹಭಾಗಿತ್ವವನ್ನು ಖಚಿತಪಡಿಸಿಕೊಳ್ಳುವುದು ಈ ಸಭೆಗಳ ಮುಖ್ಯ ಉದ್ದೇಶ. ಜನ ಸಹಭಾಗಿತ್ವದ ಮೂಲಕ ಆಡಳಿತದಲ್ಲಿ ಪಾರದರ್ಶಕ ತರಲು ಹಾಗೂ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಲು ನೆರವಾಗುವುದು. ಇದರೊಂದಿಗೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು.
ವಿಧಾನಸಭೆಯಲ್ಲಿ ಜನರಿಂದ ಚುನಾಯಿತರಾದ ವಿಧಾನಸಭಾ ಸದಸ್ಯರು ರಾಜ್ಯದ ಒಳಿತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೇಗೆ ಅವಕಾಶವಿದೆಯೋ, ಅದೇ ರೀತಿ ಗ್ರಾಮ ಮಟ್ಟದಲ್ಲಿ ಸಮುದಾಯದ ಒಳಿತಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಮ ಸಭೆಯ ಸದಸ್ಯರು ಅಂದರೆ ಮತದಾರರಿಗೆ ಅವಕಾಶವಿದೆ. ಆದ್ದರಿಂದ ಗ್ರಾಮ ಸಭೆಯನ್ನು "ಹಳ್ಳಿಯ ವಿಧಾನಸಭೆ" ಎಂದು ಸಹ ಕರೆಯುತ್ತಾರೆ.
ಕೋರಂ ಇಲ್ಲದೆ ಸಭೆಯನ್ನು ನಡೆಸುವ ಹಾಗಿಲ್ಲ. ಗ್ರಾಮ ಸಭೆಗೆ ಒಟ್ಟು ಮತದಾರರ 1/10 ರಷ್ಟು ಅಥವಾ ಕನಿಷ್ಠ 100 ಜನ ಹಾಜರಿದ್ದಲ್ಲಿ ಗ್ರಾಮಸಭೆಯನ್ನು ನಡೆಸಬಹುದು. ಗ್ರಾಮಸಭೆಯು ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕಾದರೆ ಪ್ರತಿ ವಾರ್ಡಿನಿಂದ ಕನಿಷ್ಠ 10 ಮಂದಿ ಮತದಾರರು ಇರುವಂತೆ ನೋಡಿಕೊಳ್ಳುವುದು ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.
ಕೋರಂ ಪರಿಗಣಿಸುವಾಗ ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ /ವರ್ಗದ ಜನರ ಭಾಗವಹಿಸುವಿಕೆಯನ್ನು ಸಹ ಖಚಿತಪಡಿಸಿಕೊಳ್ಳಬೇಕು. ಕರ್ನಾಟಕ ಸರ್ಕಾರ 2003 ರಲ್ಲಿ ಕರ್ನಾಟಕ ಪಂಚಾಯತಿ ರಾಜ್ ಕಾಯ್ದೆಗೆ ತಂದ ತಿದ್ದುಪಡಿಯಂತೆ ಪ್ರತಿ ಗ್ರಾಮಸಭೆಗಳಲ್ಲಿ ಮಹಿಳೆಯರ ಹಾಜರಾತಿ ಶೇಕಡ 30ರಷ್ಟಿರಬೇಕು. ಅದೇ ರೀತಿ ಅನುಚಿತ ಜಾತಿ ಮತ್ತು ಪಂಗಡದ ವ್ಯಕ್ತಿಗಳ ಹಾಜರಾತಿ ಅವರ ಜನಸಂಖ್ಯೆಗೆ ಅನುಪಾತದಷ್ಟಿರಬೇಕು ಎಂದು ಕಾಯ್ದೆಗೆ ತಿದ್ದುಪಡಿಯನ್ನು ತಂದಿರುತ್ತದೆ.
ಆದರೆ ಹರಿಹರ ತಾಲೂಕು ಯಲವಟ್ಟಿ ಗ್ರಾಮ ಪಂಚಾಯತಿಯಲ್ಲಿ 19/7/2025ನೇ ತಾರೀಕು ನಡೆಯಬೇಕಾಗಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯನ್ನು ದಿನಾಂಕ 22 ನೇ ತಾರೀಖಿನಂದು ಮುಂದೂಡಿದ್ದರು. 22 /7/ 2025ರಂದು ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯ ನೋಡಲ್ ಅಧಿಕಾರಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪ್ರಿಯದರ್ಶಿನಿ ಅವರು ಆಗಮಿಸಿದ್ದರು. ಅಂದಿನ ಸಭೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಅತಿ ಕಡಿಮೆ ಇತ್ತು. ಅಂದರೆ ಪಂಚಾಯತಿ ಕಾಯ್ದೆಯಂತೆ ಕನಿಷ್ಠ ನೂರು ಜನ ಇದ್ದರೆ ಗ್ರಾಮ ಸಭೆಯನ್ನು ನಡೆಸಲು ಅವಕಾಶವಿರುತ್ತದೆ ಅದಕ್ಕಿಂತ ಕಡಿಮೆ ಜನ ಇದ್ದರೆ ಅಥವಾ ಮತದಾರರಿದ್ದರೆ ಆ ಗ್ರಾಮ ಸಭೆಯನ್ನು ಮುಂದೂಡಬೇಕಾಗುತ್ತದೆ. ಗ್ರಾಮ ಸಭೆಗಳಲ್ಲಿ ಹೆಚ್ಚು ಜನ ಭಾಗವಹಿಸುವಂತಾಗಲು ಸೂಕ್ತ ಪ್ರಚಾರ ನೀಡಬೇಕು. ವಾರ್ಡ್ ಹಾಗೂ ಗ್ರಾಮ ಸಭೆಗಳ ವೇಳಾಪಟ್ಟಿಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಸರ್ಕಾರಿ ಕಚೇರಿಗಳ ನೋಟಿಸ್ ಬೋರ್ಡ್ ನಲ್ಲಿ ಹಾಕಬೇಕು. ಸ್ಥಳೀಯ ದಿನ ಪತ್ರಿಕೆ ಮತ್ತು ಆಕಾಶವಾಣಿಯ ಮೂಲಕ ಪ್ರಚಾರ ನೀಡಬೇಕು. ಅಲ್ಲದೆ ಸಭೆಗಳನ್ನು ನಡೆಸಲು ಒಂದು ವಾರದ ಮುಂಚಿತವಾಗಿ ಗ್ರಾಮಗಳಲ್ಲಿ ಟಾಂ ಟಾಂ ಮೂಲಕ ಪ್ರಚಾರ ಕೊಡಬೇಕು. ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಗ್ರಾಮ ಸಭೆಯನ್ನು ಮಧ್ಯಾಹ್ನದ ನಂತರವೇ ನಡೆಸಬೇಕು. ಇದು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ. ಇದರ ಜೊತೆಗೆ ಪ್ರತಿ ಗ್ರಾಮಗಳಲ್ಲಿರುವ ಸ್ವ ಸಹಾಯ ಸಂಘಗಳಿದ್ದು ಅವರಿಗೆ ಮುಂಚಿತವಾಗಿ ಗ್ರಾಮಸಭೆಯ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ಈ ರೀತಿ ಮಾಡಿದಾಗ ಗ್ರಾಮ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲು ಸಾಧ್ಯವಾಗುತ್ತದೆ ಮತ್ತು ತಮ್ಮ ಗ್ರಾಮದ ಸಮಸ್ಯೆಗಳು ಮತ್ತು ಗ್ರಾಮ ಅಭಿವೃದ್ಧಿಗೆ ಬೇಕಾದ ಸಲಹೆ- ಸೂಚನೆಗಳನ್ನು ಪಡೆಯಲು ನೆರವಾಗುತ್ತದೆ.
ನೋಡಲ್ ಅಧಿಕಾರಿಯಾಗಿ ಆಗಮಿಸಿದ ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳಾದ ಪ್ರಿಯದರ್ಶಿನಿ ಅವರು ಗ್ರಾಮ ಸಭೆಯನ್ನು ಕರೆಯುವಲ್ಲಿ ಕಲಾಪ ನಡೆಸುವಲ್ಲಿ ಅದರ ತೀರ್ಮಾನಗಳನ್ನು ಹಾಗೂ ನಿರ್ಣಯಗಳನ್ನು ನಿರ್ಣಯ ಪುಸ್ತಕದಲ್ಲಿ ದಾಖಲಿಡುವಲ್ಲಿ ಮತ್ತು ಅದರ ಮೇಲೆ ಅನುಸರಣಾ ಕ್ರಮ ಕೈಗೊಳ್ಳುವಲ್ಲಿ ಗ್ರಾಮ ಪಂಚಾಯತಿಗೆ ಮಾರ್ಗದರ್ಶನ ನೀಡಬೇಕು. ನೋಡಲ್ ಅಧಿಕಾರಿಯು ಗ್ರಾಮ ಪಂಚಾಯಿತಿಗಳ ಮೂಲಕ ಅನುಷ್ಠಾನಗೊಳಿಸುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಾಕಷ್ಟು ಮಾಹಿತಿಯನ್ನು ಹೊಂದಿರಬೇಕಾಗುತ್ತದೆ. ಗ್ರಾಮಸಭೆಗಳಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಅವರು ಹೊಂದಿರಬೇಕು.
ಕರ್ನಾಟಕ ಪಂಚಾಯತಿ ರಾಜ ಕಾಯ್ದೆ 1993 ಸೆಕ್ಷನ್ '3ಎ' ರ ಪ್ರಕಾರ ಗ್ರಾಮಸಭೆ ನಡೆಸುವುದು ಕಡ್ಡಾಯ.
ಈ ಎಲ್ಲಾ ವಿಚಾರಗಳು ಸಾಮಾಜಿಕ ಲೆಕ್ಕ ಪರಿಶೋಧನೆಯ ವ್ಯವಸ್ಥಾಪಕರಾದ ತುಕಾರಾಂ ಅವರಿಗೂ ತಿಳಿದಿದೆ. ಜೊತೆಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ಇವರಿಗೂ ತಿಳಿದಿರುತ್ತದೆ. ಇವೆಲ್ಲ ವಿಚಾರ ಗೊತ್ತಿದ್ದರೂ ಸಹ ತುಕಾರಾಮ ಅವರು ಅಭಿವೃದ್ಧಿ ಅಧಿಕಾರಿಗಳಿಂದ ಜನರ ಪಾಲ್ಗೊಳ್ಳುವಿಕೆ ಸಂಬಂಧಿಸಿದಂತೆ ಸಮರ್ಪಕವಾದ ಉತ್ತರವನ್ನು ಪಡೆಯದೆ, ಕೋರಂ ಇಲ್ಲದಿದ್ದರೂ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯನ್ನು ನಡೆಸಿರುತ್ತಾರೆ.
ಸಾಮಾಜಿಕ ಲೆಕ್ಕ ಪರಿಶೋಧನೆಯ ವ್ಯವಸ್ಥಾಪಕರಾದ ತುಕಾರಾಮ್ ಅವರು ಹರಿಹರ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಇದೇ ರೀತಿಯಲ್ಲಿ ಕೋರಂ ಇಲ್ಲದೆ ಸಾಮಾಜಿಕ ಲೆಕ್ಕ ಪರಿಶೋಧನೆಯ ಸಭೆಗಳನ್ನು ನಡೆಸಿರುತ್ತಾರೆ. ಈ ಹಿಂದೆಯೂ ವಾಸನ ಗ್ರಾಮ ಪಂಚಾಯತಿಯಲ್ಲೂ ಸಹ ಕೋರಂ ಇಲ್ಲದೆ ಸಭೆಯನ್ನು ನಡೆಸಿದ್ದರು. ಈ ವಿಚಾರವನ್ನು ಮಾನ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ತದನಂತರ ಎಳೆಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಗಳಗೊಂದಿ ಗ್ರಾಮದಲ್ಲಿ ನಡೆದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಕೋರಂ ಇಲ್ಲದೆ ಸಭೆಯನ್ನು ನಡೆಸಿಕೊಂಡು ಹೋಗಿದ್ದರು.
ಇದೇ ರೀತಿ ಕಳೆದ ಎರಡು ದಿನಗಳ ಹಿಂದೆ ನಡೆದ ಯಲವಟ್ಟಿ ಗ್ರಾಮದಲ್ಲೂ ಸಹ ಕೋರಂ ಇಲ್ಲದೆ ಸಾಮಾಜಿಕ ಲೆಕ್ಕ ಗ್ರಾಮ ಸಭೆಯನ್ನು ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹರಿಹರ ತಾಲೂಕು ಪಂಚಾಯಿತಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಕೂಡಲೇ ಎಚ್ಚೆತ್ತುಕೊಂಡ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುಮಲತಾ ಅವರು ಸಂಬಂಧಿಸಿದ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಚ್ಚೆತ್ತುಕೊಂಡ ಅಭಿವೃದ್ಧಿ ಅಧಿಕಾರಿಗಳು ತುಕಾರಾಮ್ ಅವರ ಗಮನಕ್ಕೆ ತರುತ್ತಿದ್ದಂತೆ ಗ್ರಾಮ ಸಭೆಯ ಸಂದರ್ಭದಲ್ಲಿ ವ್ಯವಸ್ಥಾಪಕರ ಕಡೆಯಿಂದ ನಡೆಯುತ್ತಿದ್ದ ಲೈವ್ ವಿಡಿಯೋ ಬಂದ್ ಮಾಡಿದ್ದಾರೆ.
ಪ್ರತಿ ಗ್ರಾಮಸಭೆಗಳನ್ನು ಮಧ್ಯಾಹ್ನ ನಡೆಸಬೇಕು ಎಂಬ ಕಾಯ್ದೆಯನ್ನು ಪಂಚಾಯಿತಿ ರಾಜ್ ಕಾಯ್ದೆಯಲ್ಲಿ ಇರುತ್ತದೆ. ಆದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಗಳನ್ನ ಉಲ್ಲಂಘನೆ ಮಾಡಿ ತುಕಾರಾಮ ಅವರು ಹರಿಹರ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಕೇವಲ ಕೋರಂ ಇಲ್ಲದೆ ಗ್ರಾಮಸಭೆ ನಡೆಸುವುದು ಅಲ್ಲದೆ. ಉದ್ಯೋಗ ಖಾತ್ರಿ ಗೆ ಸಂಬಂಧಿಸಿದಂತೆ ಜಾಬ್ ಕಾರ್ಡುಗಳನ್ನು ಪರಿಶೀಲನೆ ನಡೆಸಿರುವುದಿಲ್ಲ. ತಾಲೂಕಿನಲ್ಲಿ ನಕಲಿ ಜಾಬ್ ಕಾರ್ಡ್ಗಳು ಹೆಚ್ಚಾಗಿದ್ದು ಇವುಗಳ ಪರಿಶೀಲನೆ ಮತ್ತು ಸತ್ಯಾಸತೆಯನ್ನು ತಿಳಿಯಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಒಂದು ತನಿಖಾ ತಂಡವನ್ನು ರಚನೆ ಮಾಡುವ ಅವಶ್ಯಕತೆ ತುಂಬಾ ಇದೆ.
ಅಳತೆ ಪುಸ್ತಕದ ಪರಿಶೀಲನೆ ಇಲ್ಲ.ಕಾಮಗಾರಿ ನಡೆದ ಸ್ಥಳದ ಜಿಪಿಎಸ್ ಫೋಟೋಗಳು ಇರುವುದಿಲ್ಲ. ಜಾಬ್ ಕಾರ್ಡ್ಗಳು ನಕ್ಕಲಿಯೋ, ಅಸಲಿಯೋ ಎಂದು ತಿಳಿಯುವ ವಿಚಾರಕ್ಕೆ ಹೋಗಿರುವುದಿಲ್ಲ. ಜಾಬ್ ಕಾರ್ಡ್ ಹೊಂದಿರುವವರು ಕೆಲಸಕ್ಕೆ ಹಾಜರಾಗಿದ್ದಾರೆಯೇ ಎಂಬ ವಿಚಾರವನ್ನು ಸಹ ತಿಳಿದುಕೊಂಡಿಲ್ಲ. ಉದ್ಯೋಗ ಖಾತ್ರಿಯಲ್ಲಿ ಯಂತ್ರಗಳ ಬಳಕೆ ಆಗಿದೆಯೇ ಅಥವಾ ಜನರು ಕೂಲಿಗಳಾಗಿ ಕೆಲಸ ಮಾಡಿದ್ದಾರೆ ತಿಳಿದುಕೊಂಡಿರುವುದಿಲ್ಲ. ಒಟ್ಟಾರೆಯಾಗಿ ಕಾಟಾಚಾರಕ್ಕೆ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆಯನ್ನು ವ್ಯವಸ್ಥಾಪಕರಾದ ತುಕಾರಾಮ ಅವರು ನಡೆಸಿಕೊಂಡು ಹೋಗುತ್ತಿದ್ದಾರೆ. ಇವರಿಗೆ ಬೆನ್ನೆಲುಬಾಗಿ ಆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ನಿಂತಿದ್ದಾರೆ ಎಂಬ ಆರೋಪ ಪಂಚಾಯತಿ ವ್ಯಾಪ್ತಿಯ ಮತದಾರರಿಂದ ಕೇಳಿ ಬರುತ್ತಿದೆ.
ಕೂಡಲೇ ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇದುವರೆಗೂ ನಡೆದ ಸಾಮಾಜಿಕ ಲೆಕ್ಕ ಪರಿಶೋಧನೆಯ ಎಲ್ಲಾ ಗ್ರಾಮಸಭೆಯ ಸಂಪೂರ್ಣ ಮಾಹಿತಿಯನ್ನು ಪಡೆದು. ಅದರ ಸತ್ಯಾಸತೆಯನ್ನು ತಿಳಿದುಕೊಂಡು. (ಸಾಧ್ಯವಾದರೆ ಒಂದು ತನಿಖಾ ತಂಡವನ್ನು ರಚನೆ) ಮಾಡಿ. ಸಮಗ್ರವಾದ ವರದಿಯ ಆಧಾರದ ಮೇಲೆ ತುಕಾರಾಮ್ ಅವರ ಮೇಲೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು.
ಕೋರಂ ಇಲ್ಲದೆ ಯಲವಟ್ಟಿ ಗ್ರಾಮ ಪಂಚಾಯತಿಯಲ್ಲಿ ನಡೆದ ಗ್ರಾಮಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣವನ್ನು ಪರಿಶೀಲನೆ ಮಾಡಬೇಕು. ಜೊತೆಗೆ ಪಂಚಾಯತಿಯಲ್ಲಿರುವ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಬೇಕು ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.
0 Comments