ಮಂದಾರ ನ್ಯೂಸ್, ಹರಿಹರ : ನಗರದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಕೆಲವು ಕ್ರಮ ತೆಗೆದುಕೊಳ್ಳುವುದರ ಮೂಲಕ ಕಳ್ಳತನ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಡಿಎಸ್ಎಸ್ ತಾಲೂಕು ಅಧ್ಯಕ್ಷರಾದ ಮಂಜುನಾಥ್ ಎಂ ಲಿಖಿತರೂಪದ ಮನವಿ ಪತ್ರವನ್ನು ನೀಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು
ಮದ್ಯ ಕರ್ನಾಟಕದ ಕೇಂದ್ರ ಬಿಂದು ಹರಿಹರ. ಹರಿಹರ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದರ ಜೊತೆಗೆ ಕೆಲವು ಅಪರಾಧ ಚಟುವಟಿಕೆಗಳು ಸದ್ದಿಲ್ಲದಂತೆ ನಡೆಯುತ್ತಿವೆ. ನಗರದ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ಕೆಲವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಲಿಖಿತ ರೂಪದ ಮನವಿಯ ಉದ್ದೇಶವಾಗಿತ್ತು. ಆದ್ದರಿಂದ ಕೆಲವು ಅಂಶಗಳನ್ನು ಒಳಗೊಂಡಿರುವ ಲಿಖಿತ ರೂಪದ ಮನವಿ ಪತ್ರವನ್ನು ಇಂದು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಉಮಾ ಪ್ರಶಾಂತ್ ಅವರಿಗೆ ನಮ್ಮ ಸಂಘಟನೆಯ ವತಿಯಿಂದ ನೀಡಿದ್ದೇವೆ. ಮಾನ್ಯ ಪೊಲೀಸ ವರಿಷ್ಠಾಧಿಕಾರಿಗಳು ಸಹ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಅರ್ಜಿಯಲ್ಲಿರುವ ಕೆಲವು ಅಂಶಗಳನ್ನು ಕೂಡಲೇ ಕಾರ್ಯರೂಪಕ್ಕೆ ತರಲಾಗುವುದು ಎಂಬ ಭರವಸೆಯನ್ನು ನೀಡಿರುತ್ತಾರೆ ಎಂದು ನಮ್ಮ ಮಾಧ್ಯಮದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅವರು ಮಾನ್ಯ ಜಿಲ್ಲಾ ವರಿಷ್ಠಾಧಿಕಾರಿಗಳಲ್ಲಿ ನೀಡಿರುವ ಮನವಿ ಪತ್ರದಲ್ಲಿ ಈ ಕೆಳಗಿನ ಅಂಶಗಳು ಒಳಗೊಂಡಿದ್ದವು.
1) ನಗರದ ನಾಲ್ಕು ದಿಕ್ಕಿನಲ್ಲಿ ಅಂದರೆ ಹೊಸ ಸೇತುವೆ ರಾಘವೇಂದ್ರ ಸ್ವಾಮಿ ಮಠದ ಹತ್ತಿರ, ಶಿವಮೊಗ್ಗ ರಸ್ತೆ ಬೈಪಾಸ್ ಹತ್ತಿರ, ಹರಪನಹಳ್ಳಿ ರಸ್ತೆ ಗುತ್ತೂರು ಪವರ್ ಸ್ಟೇಷನ್ ಹತ್ತಿರ, ಹರಿಹರ ಡಿವಿಜಿ ಪಾರ್ಕ್ ಹತ್ತಿರ ಉತ್ತಮ ಗುಣಮಟ್ಟದ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸುವುದು.
2) ಹರಪನಹಳ್ಳಿ ರಸ್ತೆ ರೈಲ್ವೆ ಸೇತುವೆ ಕೆಳಗಡೆ ರಸ್ತೆ ಅತ್ಯಂತ ಅಪಾಯ ಸ್ಥಿತಿಯಲ್ಲಿದ್ದು ರಸ್ತೆ ಮಾರ್ಗದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ತಿಂಗಳಿಗೆ ಕನಿಷ್ಠ ಎಂದರೂ ನಾಲ್ಕರಿಂದ ಐದು ಅಪಘಾತಗಳು ಈ ರಸ್ತೆಯಲ್ಲಿ ನಡೆಯುತ್ತಿದೆ. ಆದ್ದರಿಂದ ಇದನ್ನು ಅಪಘಾತ ವಲಯ ಎಂದು ಘೋಷಣೆ ಮಾಡಿ ಎರಡು ಬದಿಯಲ್ಲಿ ಪಾದಾಚಾರಿಗಳು ಹಾಗೂ ವಾಹನ ಸವಾರರಿಗೆ ಕಾಣುವಂತೆ ನಾಮಫಲಕವನ್ನು ಅಳವಡಿಸುವುದು.
3) ಹರಿಹರದ ಪೋಲಿಸ್ ಇಲಾಖೆಯು ಸುಗಮ ಸಂಚಾರಕ್ಕೆ ಸಾಧ್ಯವಾದಷ್ಟು ಉತ್ತಮ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು. ಆ ನಿಟ್ಟಿನಲ್ಲಿ ಹರಿಹರದ ರಸ್ತೆಗಳು ಕಿರಿದಾಗಿರುವ ಕಾರಣ ವಾಹನ ಸವಾರರಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಸ್ವಲ್ಪ ಕಷ್ಟವಾಗಿದೆ. ಆದ್ದರಿಂದ ವಾಹನ ಸವಾಲಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ 1,3,5,2,4,6 ಮಾದರಿಯಲ್ಲಿ ರಸ್ತೆಯ ಎರಡು ಬದಿಯಲ್ಲಿ ದಿನ ಬಿಟ್ಟು ದಿನ ವಾಹನಗಳನ್ನು ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸುವುದು.
4) ಹರಿಹರದ ಕೇಂದ್ರ ಬಿಂದು ಸಿಗ್ನಲ್ ಹತ್ತಿರ ಪಾದಚಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಪ್ಪು ಬಿಳಿ ( ಜೀಬ್ರಾ)ಪಟ್ಟಿಯನ್ನು ಬರೆಯುವುದು.
6) ಹರಿಹರ ನಗರದಲ್ಲಿ ಇರಾನಿ ಗ್ಯಾಂಗ್ ಅಥವಾ ಚಡ್ಡಿ ಗ್ಯಾಂಗ್ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ಮಾಹಿತಿ ಪೊಲೀಸ್ ಇಲಾಖೆಗೆ ದೊರೆತಿದ್ದು ಸಾಧ್ಯವಾದಷ್ಟು ಕಳ್ಳತನ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪೋಲಿಸ್ ರಾತ್ರಿ ಪಾಳಿಯನ್ನು ಹೆಚ್ಚು ಮಾಡುವುದು.
7) ಹರಿಹರ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸರ್ಕಲ್ ಮತ್ತು ರಸ್ತೆಗಳಲ್ಲಿ ಭಿಕ್ಷಕರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷೆ ಬೇಡುವರ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಜನರು ಬೇಸತ್ತಿದ್ದಾರೆ. ಭಿಕ್ಷುಕರಿಗೆ ಪುನರ್ ವಸತಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಸಾಧ್ಯವಾದಷ್ಟು ಭಿಕ್ಷಾಟನೆಗೆ ಕಡಿವಾಣ ಹಾಕಬೇಕಾಗಿದೆ.
8) ರಾಜ್ಯ ಸರ್ಕಾರ ಸ್ತ್ರೀ ಶಕ್ತಿ ಯೋಜನೆಯನ್ನು ಜಾರಿಗೆ ತಂದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬಸ್ ನಿಲ್ದಾಣದ ಎರಡು ಮಾರ್ಗದ ಬದಿಯಲ್ಲಿ ಅಳವಡಿಸುವುದು ಹಾಗೂ ಹೈ ಮಾಸ್ಕ್ ಲೈಟ್ಗಳನ್ನು ಅಳವಡಿಸುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.
ಹೀಗೆ ಹಲವು ಸುರಕ್ಷತಾ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುವ ಮೂಲಕ ನಗರದ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂಬುದು ನಮ್ಮ ಸಂಘಟನೆಯ ಕಳಕಳಿಯಾಗಿದೆ ಎಂದು ಅವರು ಹೇಳಿದರು.
0 Comments