ಮಂದಾರ ನ್ಯೂಸ್ ಹರಿಹರ: ದಾವಣಗೆರೆ ಜಿಲ್ಲೆಯ ನಂಬರ್ ಒನ್ ಆಸ್ಪತ್ರೆ ಹರಿಹರದ ಸಾರ್ವಜನಿಕರ ಆಸ್ಪತ್ರೆ ದಿವಾಳಿ ಆಗಿದೆಯೇ? ಆಸ್ಪತ್ರೆಯ ನಿರ್ವಹಣೆಗೆ ಹಣವಿಲ್ಲದೆ ಪರದಾಡುತ್ತಿದೆಯೇ? ಈಗೊಂದು ಪ್ರಶ್ನೆ ಅಲ್ಲಿ ಬರುವ ರೋಗಿಗಳಿಗೆ ಕಾಡುತ್ತಿತ್ತು.
ನಮ್ಮ ಮಾಧ್ಯಮ ಪ್ರತಿನಿಧಿಯು ಆಸ್ಪತ್ರೆಯ ಪ್ರಭಾರಿ ಆಡಳಿತ ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಿಸಿದಾಗ ಅವರಿಂದ ಬಂದ ಮಾತು ನಮಗೆ ಆಶ್ಚರ್ಯ ಪಡುವಂತೆ ಮಾಡಿತು.
ಆಸ್ಪತ್ರೆಯು ಸ್ವಚ್ಛತೆ ಇಲ್ಲದೆ ನರಳುತ್ತಿದೆ. ಅಲ್ಲಿಗೆ ಬರುವ ರೋಗಿಗಳು ಕಾಯಿಲೆಯನ್ನು ಉಚಿತವಾಗಿ ಪಡೆದುಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಚಿಕಿತ್ಸೆ ಪಡೆಯಲು ಅಂಬುಲೆನ್ಸ್ ವ್ಯವಸ್ಥೆ ಇಲ್ಲದಂತಾಗಿದೆ. ಅಂಬುಲೆನ್ಸ್ ಗಳ ವಿಮೆ ಅವಧಿ ಮುಗಿದು ಹೋಗಿದೆ. ಈಗಾಗಲೇ ಒಂದು ಆಂಬುಲೆನ್ಸಿನ ವಿಮೆ ಅವಧಿ ಮುಗಿದು fc ಅವಧಿಯು ಮುಗಿದಿರುತ್ತದೆ. ರೋಗಿಗಳನ್ನ ತುರ್ತು ಚಿಕಿತ್ಸೆಗೆ ಯಾವ ವಾಹನದಲ್ಲಿ ಕರೆದುಕೊಂಡು ಹೋಗುತ್ತೀರಾ? ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮರ್ಪಕವಾಗಿ ಔಷಧಿ ಮಾತ್ರೆಗಳು ಸಿಗುತ್ತಿಲ್ಲ. ಎಂದು ಪ್ರಶ್ನಿಸಿದ್ದಾಗ ಅವರಿಂದ ಬಂದ ಉತ್ತರ ಹೀಗಿತ್ತು.
ಆಸ್ಪತ್ರೆಯ ಸ್ವಚ್ಛತೆ ಸೇರಿದಂತೆ ಇತರೆ ನಿರ್ವಹಣೆಗೆ ಆಸ್ಪತ್ರೆಯ ಖಜಾನೆಯಲ್ಲಿ ಹಣವಿಲ್ಲ. 31.10.2025 ರಂದು ಆಸ್ಪತ್ರೆಯ ಬ್ಯಾಂಕ್ ಬ್ಯಾಲೆನ್ಸ್ ಕೇವಲ 1400 ಇದೆ. ನನ್ನ ಸ್ವಂತ ಖರ್ಚಿನಲ್ಲಿ ಇತರ ಸಣ್ಣಪುಟ್ಟ ವಸ್ತುಗಳನ್ನು ತಂದಿದ್ದೇನೆ. ಕೆಮಿಕಲ್ ಮತ್ತು ಪಿನಲ್ ಸೇರಿದಂತೆ ಇತರ ವಸ್ತು ತರಲಿಕ್ಕೆ ಹಣದ ಅವಶ್ಯಕತೆ ಇದೆ. ಆದರೆ ಹಣ ಮಾತ್ರ ಕೇವಲ 1400 ಇದೆ. ಇನ್ನೂ ಆಂಬುಲೆನ್ಸ್ ವಿಮೆ ಅವಧಿ ಮುಗಿದು ಮೂರು ತಿಂಗಳು ಕಳೆದಿರುವ ವಿಚಾರ ನಮ್ಮ ಗಮನಕ್ಕೆ ಬಂದಿರುತ್ತದೆ. ಅಂಬುಲೆನ್ಸ್ ವಿಮೆ ನವೀಕರಣಕ್ಕೆ ಹಣವಿಲ್ಲ. ಆಸ್ಪತ್ರೆಯ ಖಜಾನೆ ಖಾಲಿಯಾಗಿರುವಾಗ ಹಣ ತರುವುದಾದರೂ ಎಲ್ಲಿಂದ. ಎಂಬ ಪ್ರಶ್ನೆ ನಮ್ಮ ಮುಂದೆ ಇಡುತ್ತಾರೆ.
ಹಾಗಾದರೆ ಸಾರ್ವಜನಿಕರ ಆಸ್ಪತ್ರೆಗೆ ಸರ್ಕಾರದಿಂದ ಹಾಗೂ ರೋಗಿಗಳಿಂದ ಕೆಲವು ಕಾಯಿಲೆಗಳಿಗೆ ಪಡೆದುಕೊಳ್ಳುವ ಹಣ ಎಲ್ಲಿ ಹೋಯಿತು? ಎ ಆರ್ ಎಸ್, ಓ ಪಿ ಡಿ ಹಣ ಏನಾಯ್ತು? ಒಂದು ಅಂದಾಜು ಪ್ರಕಾರ ಪ್ರತಿದಿನ ಓ ಪಿ ಡಿ ಇಂದ ಸಂದಾಯವಾಗುವ ಹಣ ಸರಿಸುಮಾರು 7 ರಿಂದ 8 ಸಾವಿರ ಎಂಬ ಮಾಹಿತಿ ಇದೆ. ಹಾಗಾದರೆ ಈ ಎಲ್ಲಾ ಹಣ ಎಲ್ಲಿ ಹೋಯಿತು.? ಎಂಬ ಪ್ರಶ್ನೆ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಕಾಡುತ್ತಿದೆ.
ಹರಿಹರ ಸಾರ್ವಜನಿಕರ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಚಾರದಿಂದ ಹಿಡಿದು ಭ್ರಷ್ಟಾಚಾರದವರೆಗೂ ಜಿಲ್ಲೆಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ ಎಂದರು ಆಶ್ಚರ್ಯಪಡಬೇಕಾಗಿಲ್ಲ. ಆಸ್ಪತ್ರೆಯ ವಿಚಾರದಲ್ಲಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಕೂಡಲೇ ಲೋಕಾಯುಕ್ತ ತನಿಖೆಯಿಂದ ಎಲ್ಲವೂ ಬಯಲಿಗೆ ಬರಬೇಕಾಗಿದೆ. ಆಸ್ಪತ್ರೆಯ ಖಜಾನೆ ಖಾಲಿಯಾಗಲು ಕಾರಣ ಯಾರು ಎಂಬುದು ತಿಳಿದುಕೊಳ್ಳಬೇಕಾಗಿದೆ. ಆಸ್ಪತ್ರೆಯ ಬ್ಯಾಂಕ್ ಅಕೌಂಟ್ ನಲ್ಲಿ ಕೇವಲ 1400 ಬಿಟ್ಟು ಉಳಿದ ಹಣ ಎಲ್ಲಿ ಹೋಯಿತು. ಯಾವ ಯಾವ ಉದ್ದೇಶಕ್ಕೆ ಹಣವನ್ನು ಬಳಸಿಕೊಳ್ಳಲಾಗಿದೆ ಎಂಬುದನ್ನು ತನಿಖೆಯಿಂದ ತಿಳಿದು ಬರಬೇಕಾಗಿದೆ. ಸರ್ಕಾರದಿಂದ ಹಾಗೂ ವಿವಿಧ ರೂಪದಲ್ಲಿ ಬಂದ ಅನುದಾನ ಮತ್ತು ರೋಗಿಗಳಿಂದ ಸಂದಾಯವಾದ ಹಣವನ್ನು ಆಸ್ಪತ್ರೆಯ ಅಭಿವೃದ್ಧಿಗಾಗಿ ಎಷ್ಟು ಬಳಸಲಾಗಿದೆ ಎಂಬ ಮಾಹಿತಿ ತಿಳಿದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಕೂಡಲೇ ಹರಿಹರ ಸಾರ್ವಜನಿಕರ ಆಸ್ಪತ್ರೆಯ ಲೆಕ್ಕ- ಪತ್ರಗಳನ್ನು ತನಿಖೆಗೆ ಒಳಪಡಿಸಬೇಕು. ಆಸ್ಪತ್ರೆಯ ವಿಚಾರದಲ್ಲಿ ಅವ್ಯವಹಾರ ಕಂಡುಬಂದರೆ ಅವರು ಯಾರೇ ಆಗಲಿ ಅವರ ಮೇಲೆ ನಿರ್ದಾಕ್ಷಣವಾಗಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ನಮ್ಮ ಮಾಧ್ಯಮದ ಕಳಕಳಿಯಾಗಿದೆ.
ಒಟ್ಟಾರೆಯಾಗಿ ಹರಿಹರದ ಸಾರ್ವಜನಿಕರ ಆಸ್ಪತ್ರೆಯ ಖಜಾನೆಯಲ್ಲಿ ಹಣ ಇಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ. ಆದರೂ ಮೇಲ್ನೋಟಕ್ಕೆ ಆಸ್ಪತ್ರೆ ದಿವಾಳಿಯಾಗಿದೆ ಎಂಬುದು ಕಂಡು ಬರುತ್ತದೆ.
0 Comments