ಮಂದಾರ ನ್ಯೂಸ್ ಹರಿಹರ: ಬಡವರ ಹಸಿವನ್ನು ನೀಗಿಸಲು ಕರ್ನಾಟಕ ರಾಜ್ಯ ಸರ್ಕಾರ ಅನ್ನಭಾಗ್ಯ ಅಕ್ಕಿ ಯೋಜನೆಯನ್ನು ಜಾರಿಗೆ ತಂದಿತ್ತು. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಆಹಾರ ಇಲಾಖೆಯ ಕೆಲವರ ಬಂಡವಾಳ ಹೂಡಿಕೆಯಿಂದ ಯೋಜನೆಯ ದಿಕ್ಕು ತಪ್ಪಿತು.
ಯಾವ ಉದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದರು ಆ ಉದ್ದೇಶ ಖದೀಮರಿಗೆ ವರದಾನವಾಯಿತು.
ಹರಿಹರದ ನಗರ ಪ್ರದೇಶದಲ್ಲಿ ವ್ಯಾಪಕವಾಗಿ ಅನ್ನಭಾಗ್ಯ ಅಕ್ಕಿ ಮಾರಾಟದ ದಂಧೆ ನಡೆಯುತ್ತಿದೆ. ಇದು ಆಹಾರ ಇಲಾಖೆಯ ನಿರೀಕ್ಷಕರ ಗಮನದಲ್ಲಿ ಇದೆ. ಆದರೆ ಅವರು ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ.
ಈ ಹಿಂದೆ ಆಹಾರ ನಿರೀಕ್ಷಕರಾಗಿದ್ದ ನಾಗೇಂದ್ರಪ್ಪ ಇವರು ಅನ್ನಭಾಗ್ಯ ಅಕ್ಕಿ ಮಾರಾಟ ದಂದೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟವಾದ ಹೆಜ್ಜೆಯನ್ನು ಇಟ್ಟಿದ್ದರು. ಆ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದ್ದರು. ಆದರೆ ಇಂತಹ ದಕ್ಷ - ಪ್ರಾಮಾಣಿಕ ಅಧಿಕಾರಿಯನ್ನು ಕೇವಲ 6 ತಿಂಗಳಿಗೆ ತಾಲೂಕಿನಿಂದ ವರ್ಗಾವಣೆ ಮಾಡಲಾಯಿತು. ಇವರ ಜಾಗಕ್ಕೆ ಈ ಹಿಂದೆ ಅನ್ನ ಭಾಗ್ಯ ಅಕ್ಕಿ ದಂಧೆಗೆ ಬೆನ್ನೆಲುಬಾಗಿ ನಿಂತು. ಪರೋಕ್ಷವಾಗಿ ಬಂಡವಾಳ ಹೂಡಿಕೆ ಮಾಡಿ.? ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ ಅಮಾನತ್ತು ಹೊಂದಿ, ಚನ್ನಗೆರೆ ವರ್ಗಾವಣೆಯಾಗಿದ್ದ ನಜರುಲ್ಲಾ ಇವರನ್ನು ಮತ್ತೆ ಅದೇ ಜಾಗಕ್ಕೆ ತಂದು ಕೂರಿಸಲಾಯಿತು. ಪರಿಣಾಮ ಅನ್ನಭಾಗ್ಯ ಅಕ್ಕಿ ಮಾರಾಟದ ದಂಧೆ ರಾಜರೋಷವಾಗಿ ಯಾರ ಭಯವಿಲ್ಲದೆ ಆಹಾರ ನಿರೀಕ್ಷಕರ ಕೃಪಾಪೋಷಿತದಿಂದ ಹರಿಹರದಲ್ಲಿ ನಿರ್ಭೀತಿಯಿಂದ ನಡೆಯುತ್ತಿದೆ.
ಇದೇ 20ನೇ ತಾರೀಕಿನಿಂದ ಅನ್ನ ಭಾಗ್ಯ ಅಕ್ಕಿ ಮಾರಾಟದ ದಂಧೆ ಆರಂಭವಾಗಿದೆ. ಆಹಾರ ಇಲಾಖೆಯ ನಿರೀಕ್ಷಕರಿಗೆ ಇದು ತಿಳಿದಿದೆ. ಯಾವ, ಯಾವ ನ್ಯಾಯಬೆಲೆ ಅಂಗಡಿಗಳಿಂದ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ದಂಧೆಕೋರರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯು ಆಹಾರ ನಿರೀಕ್ಷಕರಾದ ನಜರುಲ್ಲಾ ಇವರಿಗೆ ಇದೆ. ಆದರೆ ಕಡಿವಾಣ ಹಾಕುವ ವಿಚಾರದಲ್ಲಿ ಮಾತ್ರ ಅವರು ಮುಂದಾಗುತ್ತಿಲ್ಲ. ಇವರ ನಡೆ ಸಾರ್ವಜನಿಕರ ವಲಯದಲ್ಲಿ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಆಹಾರ ನಿರೀಕ್ಷಕರಾಗಿ ನಜರುಲ್ಲಾ ಅವರು ಮತ್ತೆ ಹರಿಹರ ನಗರಕ್ಕೆ ಬರುತ್ತಿದ್ದಂತೆ ಈ ದಂಧೆ ಆರಂಭವಾಗಿ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸುವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅಕ್ಕಿಯನ್ನು ಖರೀದಿ ಮಾಡುತ್ತಿರುವ ಎಲ್ಲಾ ದಂಧೆ ಕೋರರ ಮಾಹಿತಿಯನ್ನು ಸಂಗ್ರಹ ಮಾಡಿ. ಅವರ ಮೇಲೆ ಇದುವರೆಗೂ ದಾಖಲಾದ ದೂರುಗಳ ಮಾಹಿತಿಯನ್ನು ಪಡೆದು, ಅವರ ಮೇಲೆ ಕಾನೂನಿನ ಚೌಕಟ್ಟಿನಲ್ಲಿ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ ಎಂಬುದನ್ನು ಪರಿಗಣಿಸಿ ಅವರನ್ನು ನ್ಯಾಯಾಂಗ ಶಿಕ್ಷೆಗೆ ಒಳಪಡಿಸಬೇಕಾಗಿದೆ.
ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಸಿ ಸಿ ಕ್ಯಾಮೆರಾಗಳನ್ನು ಅಳವಡಿಸುವ ಅನಿವಾರ್ಯತೆ ಎದುರಾಗಿದೆ. ಅಂತಹ ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ತುರ್ತಾಗಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಬೇಕಾಗಿದೆ.
ಅನ್ನಭಾಗ್ಯ ಅಕ್ಕಿ ಖರೀದಿ ಮಾಡಿ, ಸಾಗಾಣಿಕೆ ಮಾಡುತ್ತಿರುವ ವಾಹನಗಳ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ಜಪ್ತಿ ಮಾಡಬೇಕಾಗಿದೆ. ಮುಂದೆ ಈ ವಾಹನಗಳು ರೋಡ್ಗೆ ಇಳಿಯದಂತೆ ನೋಡಿಕೊಳ್ಳಬೇಕು.
ಅನ್ನಭಾಗ್ಯ ಅಕ್ಕಿ ದಂಧೆಗೆ ವಾಹನವನ್ನು ಬಾಡಿಗೆಗೆ ನೀಡುತ್ತಿರುವ ವಾಹನ ಮಾಲೀಕರ ಮೇಲಿನ ಕ್ರಮ ತೆಗೆದುಕೊಳ್ಳಬೇಕಾಗಿದೆ. ವಾಹನ ಚಾಲಕನ ಹಿನ್ನೆಲೆಯನ್ನು ತಿಳಿದು ಅವರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು.
ಅನ್ನಭಾಗ್ಯ ಅಕ್ಕಿ ಮಾರಾಟಕ್ಕೆ ರೂಟ್ ಮ್ಯಾಪ್ ಜಾಗದಲ್ಲಿ ಇರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿ. ಕ್ಯಾಮೆರಾದ ದೃಶ್ಯಾವಳಿಗಳ ಆಧಾರದ ಮೇಲೆ ಅಕ್ಕಿ ಯಾವ ಜಾಗದಿಂದ , ಯಾರು ಮಾರಾಟ ಮಾಡಿದ್ದಾರೆ ಎಂದು ತಿಳಿದು ಅವರು ಎಷ್ಟೇ ಪ್ರಭಾವಿ ಆಗಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹೀಗೆ ಹಲವು ಕ್ರಮಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳಬೇಕು ಆ ನಿಟ್ಟಿನಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆಗೆ ಕಡಿವಾಣ ಹಾಕಬೇಕು.
ಈಗಾಗಲೇ ಅನ್ನ ಭಾಗ್ಯ ಅಕ್ಕಿ ಖರೀದಿ ಮಾಡುತ್ತಿರುವ ಖದೀಮರ ಮಧ್ಯೆ ಪೈಪೋಟಿ ನಡೆಯುತ್ತಿದ್ದು ಮುಂದೆ ನಗರದ ಕಾನೂನು & ಸುವ್ಯವಸ್ಥೆಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ನಗರದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯು ಆಹಾರ ಇಲಾಖೆಯ ಜೊತೆ ಕೈಜೋಡಿಸಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆಗೆ ಕಡಿವಾಣ ಹಾಕಬೇಕು.
ಮಾನ್ಯ ಜಿಲ್ಲಾಧಿಕಾರಿಗಳೇ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆಗೆ ಆಹಾರ ನಿರೀಕ್ಷಕರೊಬ್ಬರು ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಹೇಳಿ ಬಂದಿದೆ. ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ಜಿಲ್ಲಾಧಿಕಾರಿಗಳು ತಿಳಿದುಕೊಳ್ಳಬೇಕಾಗಿದೆ.
0 Comments