ರಂಗುರಂಗಿನ ಚಿತ್ತಾರದೊಂದಿಗೆ ವಿದ್ಯಾದಾಯಿನಿ ವಿದ್ಯಾರ್ಥಿಗಳಿಂದ ಅರಳಿದ ಮತದಾನ ಜಾಗೃತಿ.ಬಲಿಷ್ಠ ಭಾರತ ಕಟ್ಟುವಲ್ಲಿ ಯುವ ಮತದಾರರು ಮುಂದಾಗಿ : ಡಿ.ಜಿ.ಆರ್.!!

ಮಂದಾರ ನ್ಯೂಸ್ ಹರಿಹರ : ಯುವ ಜನರು ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಭಾರತ ಕಟ್ಟುವಲ್ಲಿ ತಮ್ಮ ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕೆಂದು ವಿದ್ಯಾದಾಯಿನಿ ಶಿಕ್ಷಣ ಮಹಾವಿದ್ಯಾಲಯದ ಸಂಸ್ಥಾಪಕರಾದ ಡಿಜಿ ರಘುನಾಥ್ ತಿಳಿಸಿದರು.

ಶುಕ್ರವಾರ (19) ನಗರದ ವಿದ್ಯಾದಾಯಿನಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ,SVEEP ತಾಲೂಕು ಪಂಚಾಯತ್ ಹರಿಹರ ಇವರ ಸಹಯೋಗದಲ್ಲಿ ವಿದ್ಯಾದಾಯಿನಿ ಶಿಕ್ಷಣ ಮಹಾವಿದ್ಯಾಲಯ ಕೆ.ಆರ್ ನಗರ ಹರಿಹರದಲ್ಲಿ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ರಘುನಾಥ್ ಡಿಜಿ ಅವರು ಮಾತನಾಡಿದರು.  
    
ನಮ್ಮ ಭಾರತ ದೇಶ, ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ  ದೇಶವಾಗಿದೆ. ಮತದಾನ ಪ್ರತಿಯೊಬ್ಬರ ಹಕ್ಕು, ಇದನ್ನು ಚಲಾಯಿಸುವುದು ನಮ್ಮ  ಕರ್ತವ್ಯ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ನನ್ನ ಮತ ಮಾರಾಟಕ್ಕಿಲ್ಲ, ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ, ನಮ್ಮ ಸಂವಿಧಾನ ನೀಡಿರುವಂತಹ ಹಕ್ಕನ್ನು ನಾವು ಪ್ರಬಲವಾಗಿ ಬಳಸಿಕೊಂಡರೆ ನಮಗೆ ಉಜ್ವಲ ಭವಿಷ್ಯವನ್ನು ನಮ್ಮ ದೇಶಕ್ಕೆ ನೀಡಬಹುದು. ಚುನಾವಣೆ ಪ್ರಜಾಪ್ರಭುತ್ವದ ಭದ್ರ ಬುನಾದಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ಮತ ಚಲಾಯಿಸಿ ,ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತದಾನ ಮಾಡಿ, ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದರು. 
ಹರಿಹರ ತಾಲೂಕು ಪಂಚಾಯತ್ ಅಧಿಕಾರಿ ಸುನಿಲಕುಮಾರ ಜಿ.ಆರ್ ಅವರು ಮಾತನಾಡಿ ಕ್ಷೇತ್ರದಲ್ಲಿ 1946 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ 17,06,169 ಕ್ಕೂ ಹೆಚ್ಚು ಮತದಾರರಿದ್ದಾರೆ. ಅದರಲ್ಲಿ 50,000 ಕ್ಕಿಂತ ಹೆಚ್ಚು ಯುವ ಮತದಾರರಿದ್ದಾರೆ. ಈ ಬಾರಿಯ ಮತದಾರ ಚೀಟಿಯಲ್ಲಿ ಕ್ಯೂಆರ್ ಕೋಡ್ ನಮೂದಿಸಲಾಗಿದೆ. ಇದರಿಂದ ನಿಮ್ಮ ಮತಗಟ್ಟೆ ಇರುವ ಸ್ಥಳ, ಮತಗಟ್ಟೆ ಸಂಖ್ಯೆಯನ್ನು ತಿಳಿಸುತ್ತದೆ ಎಂದು ಅವರು ಹೇಳಿದರು.

ವಿದ್ಯಾದಾಯಿನಿ ಶಿಕ್ಷಣ ಮಹಾವಿದ್ಯಾಲಯದ ನಿರ್ದೇಶಕರಾದ ಶ್ರೀ ಡಿ ಆರ್ ರಾಜೇಶ್ವರಿ ಅವರು ಮಾತನಾಡಿ , ಚುನಾವಣೆಯಲ್ಲಿ ಹೆಚ್ಚು ಮತದಾನವಾಗುವುದರಿಂದ ಅತ್ಯುತ್ತಮರ ಆಯ್ಕೆ  ಸಾಧ್ಯ, ಈ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕು, ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳಬೇಕು. 18 ವರ್ಷ ತುಂಬಿದ ಅರ್ಹ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ದೇಶದ ಕರ್ತವ್ಯ ನಿಭಾಯಿಸಬೇಕು. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದಲ್ಲಿ ಮುಂದಾಗಿ ಸುತ್ತ-ಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಿಕೊಡಬೇಕು ಎಂದರು.
ಯಾವುದೇ ಆಸೆ-ಆಮಿಷಗಳಿಗೆ ಮತವನ್ನು ಮಾರಾಟ ಮಾಡಿದರೆ, ನಮ್ಮತನವನ್ನು ಮಾರಾಟ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.
 
ಈ ಕಾರ್ಯಕ್ರಮದಲ್ಲಿ ಬಿ ಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ತಮ್ಮ ಕೈಗಳ ಮೇಲೆ ಮೆಹಂದಿ (ಮದರಂಗಿ) ಹಾಕಿಕೊಳ್ಳುವ ಮೂಲಕ ಮತದಾನ ಜಾಗೃತಿಯ ಬರಹದ ಚಿತ್ತಾರವನ್ನು ಬಿಡಿಸಿಕೊಂಡಿದ್ದರು. ಇದರ ಜೊತೆಗೆ ಮತದಾನ- ಮತದಾರರ ಕುರಿತಾದ ಆಕರ್ಷಣೀಯ ಚಿತ್ರಕಲೆಗಳು, ಸ್ತಬ್ಧ ಚಿತ್ರಗಳು, ಫೋಟೋ ಫ್ರೇಮ್ಗಳು, ರಂಗು ರಂಗಿನ ರಂಗೋಲಿಗಳು ನೋಡುಗರ ಕಣ್ಮನ ಸೆಳೆದವು ಮತ್ತು ಜಾಗೃತಿಯನ್ನು ಮೂಡಿಸಿದ್ದರು.
ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಅಧಿಕಾರಿ ಶ್ರೀ ಉಮೇಶ್ ಕೆ ಎಸ್, ಶ್ರೀಮತಿ ಪೂಜಾ, ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

Post a Comment

0 Comments