ಮಂದಾರ ನ್ಯೂಸ್, ರಾಣೆಬೆನ್ನೂರು : ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಈ ಬಾರಿ ಎಸ್. ಎಸ್. ಎಲ್ .ಸಿ ಪರೀಕ್ಷೆಯಲ್ಲಿ ಅನೇಕ ಬದಲಾವಣೆಯನ್ನು ಕರ್ನಾಟಕ ಪರೀಕ್ಷಾ ಮಂಡಳಿ ಜಾರಿಗೆ ತಂದಿದೆ.
ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಿಯಮದಂತೆ ಈ ಬಾರಿ ಎಸ್. ಎಸ್ .ಎಲ್. ಸಿ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರದ ಸುತ್ತಲೂ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸಬೇಕು, ಪರೀಕ್ಷೆ ನಡೆಯುವ ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಇರಬೇಕು, ಸಿ ಸಿ ಕ್ಯಾಮೆರಾದ ಸಹಾಯದ ಮೂಲಕ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷಾ ಕೊಠಡಿಯ ಚಲನ-ವಲನಗಳ ಮೇಲೆ ಕಣ್ಣಿಡುವುದು, ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವ ಶಾಲಾ ವಿದ್ಯಾರ್ಥಿಗಳ ಶಿಕ್ಷಕರು ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುವಂತಿಲ್ಲ, ಅದೇ ರೀತಿ ಶಾಲಾ ಶಿಕ್ಷಕರು ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದ ನಿಷೇಧಾಜ್ಞೆ ಪ್ರದೇಶದಿಂದ ಹೊರಗಿರುವುದು. ಪರೀಕ್ಷೆ ಕೇಂದ್ರದ ಸುತ್ತ 200 ಮೀಟರ್ ಸುತ್ತ 144 ಸೆಕ್ಷನ್ ಜಾರಿ, ಹೀಗೆ ಅನೇಕ ಬದಲಾವಣೆ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಪರೀಕ್ಷಾ ಮಂಡಳಿಯ ಉದ್ದೇಶವಾಗಿತ್ತು.
ರಾಣೇಬೆನ್ನೂರು ತಾಲೂಕು ಕೊಡಿಯಾಲ -ಹೊಸಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿದ್ಯಾನಗರದ ಅಮೃತವರ್ಷಿಣಿ ಪರೀಕ್ಷೆ ಕೇಂದ್ರದಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ? ಹೀಗೊಂದು ಅನುಮಾನ ಕೆಲ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪೋಷಕರಲ್ಲಿ ಮನೆ ಮಾಡಿದೆ.
ಅಮೃತವರ್ಷಿಣಿ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ನಿಷೇಧಾಜ್ಞೆ ಪ್ರದೇಶದ ಒಳಗೆ ಆಯಾಯ ಶಾಲೆಯ ವಿಷಯವಾರು ಶಿಕ್ಷಕರು ಕಂಡುಬಂದಿದ್ದಾರೆ. ಪರಿಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲೂ ಸಿಸಿ ಕ್ಯಾಮೆರಾ ಇರಬೇಕು ಎಂಬ ನಿಯಮ ಇದ್ದರೂ ಈ ಶಾಲೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಏಕೆ ಕ್ಯಾಮೆರಾ ಅಳವಡಿಸಿಲ್ಲ? ಪ್ರತಿ ಕೊಠಡಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ನಡುವೆ ಅಂತರವಿಲ್ಲ. ಒಂದೇ ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಕುಳಿತು ಪರೀಕ್ಷೆಯನ್ನು ಬರೆದಿದ್ದಾರೆ. ಒಟ್ಟು 251 ವಿದ್ಯಾರ್ಥಿಗಳಿಗೆ 11 ಕೊಠಡಿಗಳಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಎಲ್ಲಾ 11 ಕೊಠಡಿಯಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸದೆ ಮೊಬೈಲನ್ನು ಬಳಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆಯಾಯ ಶಾಲಾ ಶಿಕ್ಷಕರು ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುವಂತಿಲ್ಲ ಎಂಬ ನಿಯಮವಿದ್ದರೂ ಶಾಲಾ ಶಿಕ್ಷಕರು ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಈ ಮೇಲಿನ ಎಲ್ಲಾ ನಿಯಮಗಳ ಉಲ್ಲಂಘನೆಯು ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಪರೀಕ್ಷೆಗಳು ನಡೆದಿದ್ದು, ಇವರ ಕೃಪಾಕಟಾಕ್ಷದಿಂದ ನಡೆದ ಮೂರು ಪರೀಕ್ಷೆಗಳಲ್ಲಿ ಅಕ್ರಮದ ವಾಸನೆ ಕೇಳಿಬಂದಿದೆ.
ಕೆಲ ಮಾಧ್ಯಮದವರು ಅಮೃತವರ್ಷಿಣಿ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಯ ಒಳಗಡೆ ಇದ್ದರು. ಮಾಧ್ಯಮದವರು ಬಂದಿರುವ ವಿಚಾರ ಗೊತ್ತಿದ್ದರೂ ಹೊರಗೆ ಬರಲು ಮೀನಾ- ಮೇಷ ಎಣಿಸುತ್ತಿದ್ದರು. ಮಾಧ್ಯಮದವರ ಕಣ್ಣಿಂದ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಲು ಹೋಗಿ ಕೊನೆಗೆ ಮಾಧ್ಯಮದವರ ಕೈಗೆ ಸಿಕ್ಕಿಬಿದ್ದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದೆ ಸರ್ಕಾರದ ವಾಹನದಲ್ಲಿ ತೆರಳಿದರು. ಒಟ್ಟಾರೆ ಅಮೃತವರ್ಷಿಣಿ ಪರೀಕ್ಷಾ ಕೇಂದ್ರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಜಿಲ್ಲಾ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಮೀನಾ -ಮೇಷ ಎಣಿಸುತ್ತಿದ್ದಾರೆ. ಇದುವರೆಗೂ ಕರ್ತವ್ಯ ಲೋಪ ಎಸಗಿದ ಶಿಕ್ಷಕರ ಮೇಲಾಗಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನೇಕ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಅಂದೆ ಹಾವೇರಿ ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಅಮೃತವರ್ಷಿಣಿ ಪರೀಕ್ಷಾ ಕೇಂದ್ರದ ಲೋಪದ ಕುರಿತು ಮಾಹಿತಿಯನ್ನು ಸಂಗ್ರಹಿಸಿದ್ದು ಕ್ರಮ ಕೈಗೊಳ್ಳುವ ವಿಶ್ವಾಸ ನೊಂದ ಪೋಷಕರು ಹೊಂದಿದ್ದಾರೆ.
ಅಮೃತವರ್ಷಿಣಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸದೆ ಪರೀಕ್ಷೆ ನಡೆಸಿರುವ ಹಿಂದಿನ ಉದ್ದೇಶ ಏನು ?ಎಂಬುದು ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿದಾಗ ಮಾತ್ರ ಸತ್ಯ ಹೊರಬರಲು ಸಾಧ್ಯ.
ಕೂಡಲೇ ಶಿಕ್ಷಣ ಮಂತ್ರಿಗಳು ರಾಣೇಬೆನ್ನೂರು ತಾಲೂಕು ಕೊಡಿಯಾಲ -ಹೊಸಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿದ್ಯಾನಗರದ ಅಮೃತವರ್ಷಿಣಿ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆಯನ್ನು ನಡೆಸಬೇಕು ಹಾಗೂ ತಪ್ಪಿತಸ್ಥರನ್ನು ಕರ್ತವ್ಯದಿಂದ ಅಮಾನತ್ತು ಮಾಡಬೇಕು. ಆ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮುಂದಾಗಬೇಕು ಎಂಬುದು ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಯ ಆಶಯವಾಗಿದೆ.
ಪ್ರಕಾಶ್ ಮಂದಾರ
8880499904
0 Comments