ಸಾಗರ 'ರಿಪಬ್ಲಿಕ್ ಆಫ್ ಬಳ್ಳಾರಿ' ಆಗುತ್ತಿದೆಯೇ?

ಮಂದಾರ  ನ್ಯೂಸ್ , ಸಾಗರ:  ಸಾಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅರಣ್ಯ ಹಾಗೂ ಸರ್ಕಾರಿ ಮತ್ತು ಬಗರ್ ಹುಕ್ಂ ಜಮೀನುಗಳಲ್ಲಿ  ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯುವಂತೆ ತಾಲೂಕು ದಂಡಾಧಿಕಾರಿಗಳಲ್ಲಿ ಪ್ರಜ್ಞಾವಂತ ನಾಗರಿಕರು ಹಾಗೂ ಪರಿಸರ ಪ್ರೇಮಿಗಳಿಂದ ಮನವಿ.
ಸಾಗರ ತಾಲ್ಲೂಕಿನ ಅನಂದಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಾಗೂ ತಾಳಗುಪ್ಪ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿನ ಅರಣ್ಯ ಹಾಗೂ ಬಗರ್ ಹುಕ್ಂ, ಸರ್ಕಾರಿ  ಜಮೀನುಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಈ ಹಿಂದಿನ ವರ್ಷಗಳಲ್ಲಿ ಅವ್ಯಾಹತವಾಗಿ ನಡೆಸಲಾಗಿದೆ. ಈ ವರ್ಷವೂ ಆ ಭಾಗದಲ್ಲಿ ಕಲ್ಲು ಗಣಿಗಾರಿಕೆಗೆ ನಡೆಸಲಾಗಿದೆ. ಸರ್ಕಾರಿ ಕೆರೆ ಜಾಗಗಳು ಸೇರಿದಂತೆ ಅರಣ್ಯ ಭೂಮಿ ಮತ್ತು ಕೃಷಿ ಫಲವತ್ತಾದ ಭೂಮಿಯಲ್ಲಿ 40 ರಿಂದ 80 ಅಡಿಗಳ ಆಳದವರೆಗೆ ಜೆಸಿಬಿ, ಹಿಟಾಚಿಯಂತಹ ಬೃಹತ್ ಯಂತ್ರಗಳಿಂದ ಗುಂಡಿಗಳನ್ನು ತೋಡುತ್ತಾ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ.

ತ್ಯಾಗರ್ತಿ, ಹಿರೇಬೇಲಗುಂಜಿ, ಗೌತಮಪುರ ,ಬರೂರು, ಉಳಿವಿ, ಮಂಚಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಂದಾಜು ಸರಿಸುಮಾರು ಸಾವಿರಕ್ಕೂ ಹೆಚ್ಚು ಎಕರೆಯಷ್ಟು ಸರ್ಕಾರಿ ಕಂದಾಯ ಭೂಮಿ ಹಾಗೂ ಅರಣ್ಯ ಮತ್ತು  ಬಗರ್  ಹುಕ್ಂ ಭೂಮಿಯಲ್ಲಿ ಮತ್ತು ಸರ್ಕಾರಿ ಕೆರೆ ಜಾಗಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ವಿಚಾರ ಸಂಬಂಧಿಸಿದೆ ಇಲಾಖೆಯವರ ಗಮನದಲ್ಲಿದೆ. ಸರ್ಕಾರದಿಂದ ಮಂಜೂರಾದ  ಇತರೆ ಜನಾಂಗದವರ  ರುದ್ರಭೂಮಿಯಲ್ಲೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಮೃತರ ಅಂತ್ಯ ಸಂಸ್ಕಾರ ನಡೆಸದಂತಾಗಿದೆ ಎಂಬ ಆರೋಪ ಕೆಲವು ಗ್ರಾಮದ ನಾಗರಿಕರಿಂದ ಕೇಳಿ ಬಂದಿದೆ.
3 ಅಡಿಯಷ್ಟು ಮಾತ್ರ ಕೃಷಿಪಲವತ್ತಾದ ಜಮೀನುಗಳನ್ನು ಸಮತಟ್ಟ ಮಾಡಲು ಅನುಮತಿಯೊಂದಿಗೆ ಅವಕಾಶವಿದೆ, 3 ಅಡಿಗಿಂತ ಹೆಚ್ಚು ಕಲ್ಲುಗಳನ್ನು ತೆಗೆದರೆ ಅಂತಹ ಪಟ್ಟಾ ಜಮೀನುಗಳನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆಯಲು ಅವಕಾಶವಿದ್ದರೂ ತಾಲ್ಲೂಕು, ಜಿಲ್ಲಾಡಳಿತ, ಕಂದಾಯ, ಭೂ ಮತ್ತು ಗಣಿ, ಅರಣ್ಯ,ಪರಿಸರ ಮತ್ತು ಕೃಷಿ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿವೆ. ಸರ್ಕಾರಿ ಕೆರೆ ಹಾಗೂ ಅರಣ್ಯ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಯನ್ನು  ಪಟ್ಟಭದ್ರರು ಈಗಾಗಲೆ ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳನ್ನು ಸಂಪರ್ಕಿಸಿ ತೆರೆಮರೆಯಲ್ಲಿ ವ್ಯಾಪಾರ ಕುದುರಿಸುತ್ತಿದ್ದಾರೆ. ಈ ಹಿಂದಿನ ಹತ್ತಾರು ವರ್ಷಗಳ ಕಾಲ ನಡೆಸಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ತಾಲ್ಲೂಕಿನ ಪರಿಸರ ನಲುಗಿರುವುದು ಸಾಕಾಗಿದೆ.

ಈ ವರ್ಷವೂ ಗಣಿಗಾರಿಕೆಗೆ ಅವಕಾಶ ನೀಡಿದರೆ ತಾಲ್ಲೂಕಿನ ಭೌಗೋಳಿಕ ರಚನೆಯ ಮೇಲೆ ತೀವ್ರ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಒಂದು ಜಮೀನಿನ ರೈತ ತನ್ನ ಜಮೀನಿನ ಕಲ್ಲು ತೆಗಿಯಲು ಜಮೀನು ಮಾರಿಕೊಂಡು 40 ಅಡಿ ಗುಂಡಿ ಸೃಷ್ಟಿಸಿದರೆ ಪಕ್ಕದ ಜಮೀನಿನ ಬಡ ರೈತನಿಗೆ ಕೃಷಿ ಕಾಯಕ ನಡೆಸಲು ಹೇಗೆ ಸಾಧ್ಯವಾಗುತ್ತದೆ.ಇದು ತಾಲ್ಲೂಕಿನ ಗಡಿಯ ಜೈವಿಕ, ಭೌಗೋಳಿಕ ಸ್ಥಿತಿಗಳನ್ನು ಏರುಪೇರು ಮಾಡುವ ಅಪಾಯವಿದೆ.
ಈವರೆಗೆ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಗಮನಿಸಿದರೆ ಸಾಗರವು "ರಿಪಬ್ಲಿಕ್‍ ಆಫ್‍ ಬಳ್ಳಾರಿ" ಯಂತೆ ತಪ್ಪು ಹೆಜ್ಜೆಯತ್ತ ಸಾಗುತ್ತಿದೆಯೆ ಎಂಬ ದಟ್ಟ ಅನುಮಾನ ಮೂಡುತ್ತಿದೆ. 

ಕೂಡಲೆ ರಾಜ್ಯ ಸರ್ಕಾರವು ತಾಲ್ಲೂಕಿನ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಪರಿಶೀಲಿಸಲು ದ್ರೋಣ್ ಯಂತ್ರದ ಸಹಾಯ ಪಡೆಯಬೇಕು, ಇದಕ್ಕೆ ಸಹಕಾರ ನೀಡಿದ ಆರೋಪ ಇರುವ ಕಂದಾಯ, ಭೂ ಮತ್ತು ಗಣಿ ವಿಜ್ಞಾನ,ಅರಣ್ಯ, ಪರಿಸರ, ಪೊಲೀಸ್, ಕೃಷಿ ಇಲಾಖೆಗಳ ಹಿಂದಿನ, ಈಗಿನ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಸುದ್ದಿ ವಾಹಿನಿಯ ಆಗ್ರಹವಾಗಿದೆ. 

ಇದುವರೆಗೂ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸರ್ಕಾರದ ಆರ್ಥಿಕ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಕೆಲವು ಇಲಾಖೆಯ ಅಧಿಕಾರಿಗಳ ಮನೆಯ ಖಜಾನೆ ತುಂಬಿದೆ. ಕೆಲವರು ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕೋಟಿ ಕೋಟಿ ಹಣ ಸಂಪಾದಿಸಿದ್ದು ಕೂಡಲೇ ಲೋಕಾಯುಕ್ತ ತನಿಖೆಯು ನೆಡೆಯಬೇಕಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ನಾಗರ ತಾಲೂಕಿನ ಕೆಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ನಡೆಸಬೇಕು ಈ ವಿಚಾರದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನಿವೃತ್ತ ನ್ಯಾಯಾಧೀಶರ ಮೂಲಕ ಸಾಗರ ತಾಲೂಕಿನ ಅತ್ಯಂತ ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿ ನಡೆದಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಗ್ರ ಸಮೀಕ್ಷೆಯನ್ನು ನಡೆಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಅವರ ಎಲ್ಲಾ ರೀತಿಯ ಆಸ್ತಿಗಳನ್ನು ಜಪ್ತಿ ಮಾಡುವ ಮೂಲಕ ರಾಷ್ಟ್ರೀಯ ಸಂಪತ್ತುಗಳನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ದಿಟ್ಟವಾದ ಹೆಜ್ಜೆಯನ್ನು ಇಡಬೇಕಾಗಿದೆ. 
 
ಮುಂದಿನ ಸಂಚಿಕೆಯಲ್ಲಿ.....
ಅಕ್ರಮ ಕಲ್ಲು ಗಣಿಗಾರಿಕೆಯ ಹಿಂದೆ ಆನಂದಪುರ ಪೊಲೀಸ್ ಇಲಾಖೆಯ ಕರಿ ನೆರಳು..

Post a Comment

0 Comments