ಮಂದಾರ ನ್ಯೂಸ್, ಹರಿಹರ : ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ,ನಿಷ್ಠೆ ಹಾಗೂ ಪ್ರಾಮಾಣಿಕತೆ ಇರಬೇಕು. ಸರ್ಕಾರದ ಕೆಲಸ ದೇವರ ಕೆಲಸ ಎಂದು ಮಾಡಬೇಕು. ಈ ಘೋಷವಾಕ್ಯ ಕೇವಲ ಗೋಡೆಯ ಬರಹವಾಗಬಾರದು.
ನಿನ್ನೆ ದಿನ ಹರಿಹರ ತಾಲೂಕು ಮಲೆಬೆನ್ನೂರು ಹೋಬಳಿ, ಹೊಳೆ ಸಿರಿಗೆರೆ ಕ್ರಾಸ್, ಯಲವಟ್ಟಿ ರಸ್ತೆ ಪಕ್ಕದ ತೋಟ ಒಂದರಲ್ಲಿ ಬೆಳಗಾವಿ ಮೂಲದ ಕುರಿಗಾಹಿಗಳು ತಮ್ಮ ಕುರಿಗಳ ಸುತ್ತಲೂ ಬಲೆಯನ್ನು ಹಾಕಿ ರಾತ್ರಿ ಹೊತ್ತು ತೋಟದ ಹೊಲದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ತಡರಾತ್ರಿ ಎರಡು ಚಿರತೆಗಳು ಕುರಿ ಹಿಂಡುಗಳ ಮೇಲೆ ದಾಳಿ ನಡೆಸಿರುತ್ತವೆ. ಸಂದರ್ಭದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುತ್ತವೆ.
ಚಿರತೆ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ತಾಲೂಕ್ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಗ್ರವಾದ ವರದಿಯನ್ನು ಪಡೆದಿರುತ್ತಾರೆ. ಹಾಗೂ ನಷ್ಟವನ್ನು ಬರಿಸುವ ಭರವಸೆಯನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದ ಕುರಿತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಅಂದರೆ ಮೇ 27ರಂದು ಈ ಹೊಳೆ ಸಿರಿಗೆರೆ ಭಾಗದಲ್ಲಿ ಚಿರತೆ ಕಂಡಿರುವ ಮಾಹಿತಿಯನ್ನು ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಹಂಚಿಕೊಂಡಿರುತ್ತಾರೆ. ಗ್ರಾಮಸ್ಥರ ಸುದ್ದಿಯ ಮಾಹಿತಿಯಿಂದ ಎಚ್ಚೆತ್ತುಕೊಂಡು ಚಿರತೆ ಹಿಡಿಯಲು ಪ್ರಯತ್ನಿಸಬೇಕಾದ ಅಧಿಕಾರಿಗಳು ಗ್ರಾಮಸ್ಥರ ಮಾಹಿತಿಯನ್ನ ನಿರ್ಲಕ್ಷ್ಯ ಮಾಡಿರುತ್ತಾರೆ. ಅವರ ನಿರ್ಲಕ್ಷದಿಂದಲೇ ನಿನ್ನೆ ದಿನ ಅಮಾಯಕ ಕುರಿಗಾಹಿಗಳ 21 ಕುರಿಗಳು ಚಿರತೆಯ ಬಾಯಿಗೆ ಆಹುತಿಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರು ನೀಡಿದ ಸಮಯದಲ್ಲೇ ಚಿರತೆಯನ್ನು ಹಿಡಿದಿದ್ದರೆ ನಿನ್ನೆ ದಿನ ಈ ಘಟನೆ ಸಂಭವಿಸುತ್ತಿರಲಿಲ್ಲ.
ನಿನ್ನೆಯ ಘಟನೆಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತಾಲೂಕ್ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಒಂದು ಅರ್ಜಿಯನ್ನು ನೀಡಿರುತ್ತಾರೆ. ಹೊಳೆ ಸಿರಿಗೆರೆ ಹಾಗೂ ಯಲವಟ್ಟಿ ಗ್ರಾಮದಲ್ಲಿ ಚಿರತೆ ಕಂಡು ಬಂದಿರುವುದಿಲ್ಲ ಜನರು ಎಚ್ಚರಿಕೆ ವಹಿಸುವಂತೆ ಗ್ರಾಮ ಪಂಚಾಯತಿಯಿಂದ ಜಾಗೃತಿ ಹಾಗೂ ಡಂಗುರವನ್ನು ಸಾರಲು ಲಿಖಿತ ರೂಪದಲ್ಲಿ ಅರ್ಜಿಯನ್ನು ನೀಡಿರುತ್ತಾರೆ. ಈ ಅರ್ಜಿಗೆ ವಲಯ ಅರಣ್ಯ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಸಹಿ ಮಾಡಿರುತ್ತಾರೆ.
ನಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳ ಜ್ಞಾನ ಸಂಪತ್ತು ಹಾಗೂ ವಲಯ ಅರಣ್ಯ ಅಧಿಕಾರಿಗಳ ಕರ್ತವ್ಯದಲ್ಲಿನ ದಕ್ಷತೆ ಈ ಅರ್ಜಿಯನ್ನ ಕಂಡುಬರುತ್ತದೆ. ನೋಡಿ ಅರ್ಜಿ ಯಾವ ರೀತಿ ಇದೆ ಎಂದರೆ ಹೊನ್ನಾಳಿ ತಾಲೂಕು ಹೊಳೆ ಸಿರಿಗೆರೆ , ಯಲವಟ್ಟಿ ಹಾಗೂ ಜಿಗಳಿ ಗ್ರಾಮಗಳಲ್ಲಿ ವನ್ಯಪ್ರಾಣಿಯಾದ ಚಿರತೆಯು ಓಡಾಡುತ್ತಿರುವುದರಿಂದ ಜನರು ಎಚ್ಚರಿಕೆಯಿಂದ ಇರಲು ಮಾಹಿತಿಯನ್ನು ನೀಡುವಂತೆ ಹರಿಹರ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿಯನ್ನ ಮಾಡಿಕೊಂಡಿರುತ್ತಾರೆ.
ಈ ಲಿಖಿತ ರೂಪದ ಅರ್ಜಿಗೆ ದಾವಣಗೆರೆ ವಲಯ ಅರಣ್ಯ ಅಧಿಕಾರಿಗಳು ಸಹಿ ಮಾಡಿ ಕಳಿಸಿರುತ್ತಾರೆ. ವಲಯ ಅರಣ್ಯ ಅಧಿಕಾರಿಗಳು ಯಾವುದೋ ಸಮಾರಂಭಕ್ಕೆ ಕುಟುಂಬ ಸಮೇತ ಹೊರಟಂತೆ ಕಾಣುತ್ತಿದೆ. ಅಥವಾ ಈ ಸರ್ಕಾರಿ ಕೆಲಸದ ಮೇಲೆ ಬೇಸರ ಇದ್ದಂತೆ ಕಂಡಿರಬಹುದು. ಏಕೆಂದರೆ ಹೊಳೆ ಸಿರಿಗೆರೆ, ಯಲವಟ್ಟಿ, ಜಿಗಳಿ ಗ್ರಾಮಗಳು ನಮಗೆ ತಿಳಿದಂತೆ ಹರಿಹರ ತಾಲೂಕಿನಲ್ಲಿ ಇದೆ. ಚಿರತೆಯ ದಾಳಿಯೂ ಹರಿಹರ ತಾಲೂಕಿನ ಈ ಮೇಲಿನ ಗ್ರಾಮದಲ್ಲಿ ನಡೆದಿದೆ. ಆದರೆ ನಮ್ಮ ವಲಯ ಅರಣ್ಯ ಅಧಿಕಾರಿಗಳಿಗೆ ಹೊನ್ನಾಳಿ ತಾಲೂಕಿನ ಈ ಗ್ರಾಮಗಳಲ್ಲಿ ಚಿರತೆ ದಾಳಿಯಾಗಿದ್ದು ಯಾವಾಗ? ಅಷ್ಟಕ್ಕೂ ಈ ಗ್ರಾಮಗಳು ಹೊನ್ನಾಳಿ ತಾಲೂಕಿಗೆ ಸೇರಿದ್ದಾದರೂ ಯಾವಾಗ? ಏನಾದರೂ ಕಚೇರಿಯಲ್ಲಿ ಕುಳಿತು ಈ ಗ್ರಾಮಗಳನ್ನು ಹೊನ್ನಾಳಿ ತಾಲೂಕಿಗೆ ಸೇರಿಸಿದರೆ? ಒಂದು ತಿಳಿಯುತ್ತಿಲ್ಲ..
ಸ್ವಾಮಿ.. ವಲಯ ಅರಣ್ಯ ಅಧಿಕಾರಿಗಳೇ ಸ್ವಲ್ಪ ಕರ್ತವ್ಯದಲ್ಲಿ ಪ್ರಾಮಾಣಿಕತೆ ಇರಲಿ. ಕರ್ತವ್ಯ ಪ್ರಜ್ಞೆಯಿಂದ ಕೆಲಸ ನಿರ್ವಹಿಸಿ. ಬೇಜವಾಬ್ದಾರಿತನ ಒಳ್ಳೆಯದಲ್ಲ. ನಿಮಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನ ನೀಡಿ ವಲಯ ಅರಣ್ಯ ಅಧಿಕಾರಿಯ ಕುರ್ಚಿಯ ಮೇಲೆ ಕೂರಿಸಲಾಗಿದೆ. ಜನಸಾಮಾನ್ಯರ ತೆರಿಗೆ ಹಣದಿಂದ ಪ್ರತಿ ತಿಂಗಳು ಸಂಬಳವನ್ನು ಎನಿಸುತ್ತಿದ್ದೀರಾ ,ಕುಟುಂಬವನ್ನು ಸಾಕುತ್ತಿದ್ದೀರಾ. ನಿಮ್ಮಿಂದ ಅರಣ್ಯ ಸಂಪತ್ತು ಉಳಿಯಲಿಲ್ಲ. ಇರುವ ಅಲ್ಪ ಸ್ವಲ್ಪ ಅರಣ್ಯ ಸಂಪತ್ತನ್ನು ಉಳಿಸುವ ಮನಸ್ಸು ನಿಮಗಿಲ್ಲ. ಆದರೂ ನಿಮಗೆ ಒಂದು ಇಲಾಖೆ ಅದಕ್ಕೆ ಒಬ್ಬ ಸಚಿವ. ಚೆನ್ನಾಗಿದೆ....
ಇದು ನಿಮಗೆ ಸಣ್ಣ ತಪ್ಪು ಅನಿಸಬಹುದು ಆದರೆ ಮೇಲ್ನೋಟಕ್ಕೆ ನಿಮ್ಮ ಬೇಜವಾಬ್ದಾರಿತನ ಸ್ಪಷ್ಟವಾಗಿ ಕಂಡುಬರುತ್ತದೆ. ಯಾವುದೇ ಅರ್ಜಿ ಬಂದಾಗ ಅದನ್ನು ಓದಿ ಸಹಿ ಮಾಡಬೇಕು ಎಂಬ ಅರಿವು ನಿಮಗಿಲ್ಲವೇ? ಯಾರೋ ತಂದರು, ಯಾರೋ ಕೊಟ್ಟರು, ನಾನು ಸಹಿ ಮಾಡಿದೆ ಎಂದಾದರೆ ಸಾಕೆ. ಅಲ್ಪ ಓದುವ ,ಬರೆಯುವ ಜ್ಞಾನವನ್ನು ಬೆಳೆಸಿಕೊಳ್ಳಿ. ಸರ್ಕಾರದ ಕೆಲಸ ದೇವರ ಕೆಲಸ ಎಂಬುದನ್ನ ಮೈಗೂಡಿಸಿಕೊಳ್ಳಿ. ಇಂತಹ ಸಣ್ಣ ತಪ್ಪು ನಿಮ್ಮಿಂದ ಆಗಬಾರದು. ಕಾಟಾಚಾರಕ್ಕೆ ಸಹಿ ಮಾಡಿ ಕಳಿಸಿದರೆ ಸಾಲದು. ಚಿರತೆ ಹಿಡಿಯುವ ಪ್ರಯತ್ನ ಮಾಡಬೇಕು. ನೀವು ಸಹಿ ಮಾಡಿ ಕಳಿಸಿದ್ದ ಅರ್ಜಿ ನೋಡಿದರೆ ನಿಮಗೆ ಚಿರತೆ ಹಿಡಿಯುವ ಮನಸ್ಸು ಇದ್ದಂತೆ ಕಾಣುತ್ತಿಲ್ಲ. ಇನ್ನು ಅದೆಷ್ಟು ಅಮಾಯಕ ಜೀವಗಳ ಬಲಿ ನಿಮಗೆ ಬೇಕಾಗಿದೆಯೋ ತಿಳಿಯುತ್ತಿಲ್ಲ. ಸ್ವಲ್ಪ ನಿದ್ದೆ ಮಬ್ಬಿನಿಂದ ಎದ್ದು ಚುರುಕಿನಿಂದ ಕೆಲಸ ಮಾಡಿ. ಈ ರೀತಿ ಬೇಜವಾಬ್ದಾರಿತನ ಸಲ್ಲದು.
ಮಾನ್ಯ ಜಿಲ್ಲಾಧಿಕಾರಿಗಳೇ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ವಲಯ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಒಮ್ಮೆ ನೋಡಿ. ಇದಕ್ಕೆ ನಿಮ್ಮ ಉತ್ತರ ಹೇಗಿರುತ್ತದೆ ಎಂಬುವುದನ್ನು ಸಾರ್ವಜನಿಕರಿಗೆ ತಿಳಿಸಿ....
ಗುರುವಿನಂತೆ ಶಿಷ್ಯರು ಎನ್ನುವಂತ ಮಾತುಗಳು ಸಾರ್ವಜನಿಕರು ಆಡಿಕೊಳ್ಳದಂತೆ ನೋಡಿಕೊಳ್ಳಿ......
0 Comments