ಹರಿಹರ: ತಾಲೂಕು ಕಚೇರಿಯಲ್ಲಿ "ಹಾಲುಣಿಸುವ ತಾಯಂದಿರಿಗೆ" ಪ್ರತ್ಯೇಕ ವಿಶ್ರಾಂತಿ ಕೊಠಡಿ ತೆರೆಯಿರಿ.

ಮಂದಾರ ಜ್ವಾಲೆ: ಪ್ರತಿದಿನ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತಾಲೂಕಿನ ಗ್ರಾಮೀಣ ಭಾಗದ ಜನರು ಪ್ರತಿದಿನ ತಾಲೂಕು ಕಚೇರಿಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರು ಸೇರಿದಂತೆ ಎಲ್ಲಾ ವರ್ಗದ ಜನರು ಸರ್ಕಾರಿ ಕಚೇರಿಗೆ ಆಗಮಿಸುತ್ತಾರೆ. ತಮ್ಮ ಕೆಲಸ- ಕಾರ್ಯಗಳಿಗಾಗಿ ಸಮಯವನ್ನು ಮೀಸಲಿಡುತ್ತಾರೆ. 

"ಸರ್ಕಾರದ ಕೆಲಸ ದೇವರ ಕೆಲಸ" ಎಂದು ಮಾಡಿದಾಗ ಜನಸಾಮಾನ್ಯರ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗಲು ಸಾಧ್ಯವಾಗುತ್ತದೆ. ಆದರೆ ಯಾವುದೇ ಸರ್ಕಾರಿ ನೌಕರರು "ಸರ್ಕಾರದ ಕೆಲಸ ದೇವರ ಕೆಲಸ" ಎಂದು ಮಾಡಿರುವ ಉದಾಹರಣೆಗಳು ಕಡಿಮೆ. ಆ ಸಂದರ್ಭದಲ್ಲಿ ಜನಸಾಮಾನ್ಯರು ಪ್ರತಿ ದಿನ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. 
ಹರಿಹರದ ತಾಲೂಕು ಕಚೇರಿಯಲ್ಲಿ ಮಹಿಳೆಯರು ತಮ್ಮ ಮಕ್ಕಳಿಗೆ ಹಾಲುಣಿಸಲು ತೀವ್ರ ಪರದಾಟವನ್ನು ಪಡುತ್ತಿದ್ದಾರೆ. ಅನಿವಾರ್ಯವಾಗಿ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣದಂತೆ ಮರೆಮಾಡಿಕೊಂಡು ಮಕ್ಕಳಿಗೆ ಹಾಲುಣಿಸಬೇಕಾಗಿದೆ. ಇದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನೂ ನಾವು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ನಾವು ಸೋತಿದ್ದೇವೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಇದರ ಜೊತೆಗೆ ಅಂಗವಿಕಲರಿಗೆ ಮತ್ತು ವೃದ್ಧರಿಗೆ ಕಚೇರಿಯ ಒಳಗಡೆ ಕುಳಿತುಕೊಳ್ಳಲು ಅಸನದ ವ್ಯವಸ್ಥೆ ಇಲ್ಲ. ಕಚೇರಿಯ ಒಳಗಡೆ ವಿಶಾಲವಾದ ಜಾಗದ ವ್ಯವಸ್ಥೆ ಇದ್ದರೂ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಇದುವರೆಗೂ ಅಸನದ ವ್ಯವಸ್ಥೆಯನ್ನ ಕಲ್ಪಿಸಿರುವುದಿಲ್ಲ. ಇದರಿಂದ ಸಾರ್ವಜನಿಕರು ಕಚೇರಿಯ ಮುಂಭಾಗದ ಕಟ್ಟೆಯಲ್ಲಿ ಕುಳಿತು ವಿಶ್ರಾಂತಿಯನ್ನ ಪಡೆಯುವುದರ ಜೊತೆಗೆ ತಮ್ಮ ಸರದಿಗಾಗಿ ಕಾಯುವಂತಾಗಿದೆ.
ಕೂಡಲೇ ಮಾನ್ಯ ದಾವಣಗೆರೆ ಜಿಲ್ಲಾಧಿಕಾರಿಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದಲಾದರೂ ಹರಿಹರ ತಾಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಹಾಲುಣಿಸುವ ತಾಯಂದಿರಿಗೆ ಪ್ರತ್ಯೇಕವಾದ ವಿಶ್ರಾಂತಿ ಕೊಠಡಿ ತೆರೆಯುವಂತಾಗಲಿ, ವಯೋ ವೃದ್ಧರಿಗೆ ಅಂಗವಿಕಲರಿಗೆ ಕುಳಿತುಕೊಳ್ಳಲು ಹಾಸನದ ವ್ಯವಸ್ಥೆಯನ್ನು ಕಲ್ಪಿಸುವಂತಾಗಲಿ ಎಂಬುದು ನಮ್ಮ ಬರಹದ ಉದ್ದೇಶವಾಗಿದೆ.

ನಮ್ಮ ಮಂದಾರ ಜ್ವಾಲೆ ವಾರಪತ್ರಿಕೆಯು ಕರ್ನಾಟಕದ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳನ್ನು ಸ್ಥಾಪಿಸಲು ಮನವಿ ಮಾಡಿಕೊಳ್ಳುತ್ತೇವೆ. ಈ ಕೊಠಡಿಗಳು ಹಾಲುಣಿಸುವ ತಾಯಂದಿರಿಗೆ, ಗರ್ಭಿಣಿಯರಿಗೆ ಮತ್ತು ತುರ್ತು ವೈದ್ಯಕೀಯ ವಿಶ್ರಾಂತಿ ಅಗತ್ಯವಿರುವ ಮಹಿಳೆಯರಿಗೆ ಅನುಕೂಲ ಕಲ್ಪಿಸಿಕೊಡುತ್ತವೆ. 
ಮುಖ್ಯಾಂಶಗಳು:
ಉದ್ದೇಶ: ಹಸುಗೂಸುಗಳಿಗೆ ಹಾಲುಣಿಸುವ ತಾಯಂದಿರು, ಮಾಸಿಕ ಋತುಚಕ್ರ, ಗರ್ಭಧಾರಣೆ ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ವಿಶ್ರಾಂತಿ ಪಡೆಯಲು.
ಸೌಲಭ್ಯ: ಪ್ರತ್ಯೇಕ ಕೊಠಡಿ, ಕುಳಿತುಕೊಳ್ಳಲು ಆಸನಗಳು ಮತ್ತು ಹಾಲುಣಿಸಲು ಅನುಕೂಲಕರ ವ್ಯವಸ್ಥೆ.
ಸುಪ್ರೀಂ ಕೋರ್ಟ್ ಸೂಚನೆ: ಸಾರ್ವಜನಿಕ ಮತ್ತು ಕೆಲಸದ ಸ್ಥಳಗಳಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಸೂಕ್ತ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಸ್ಪಷ್ಟಪಡಿಸಿದೆ.
ವಿಕಾಸಸೌಧದಂತಹ ಕೆಲವು ಕಡೆ ಸೌಲಭ್ಯವನ್ನು ಕಲ್ಪಿಸಬೇಕು, ಇತರೆ ಕಚೇರಿಗಳಲ್ಲಿ ಇದನ್ನು ವಿಸ್ತರಿಸುವ ಅಗತ್ಯವಿದೆ. 
ಈ ಉಪಕ್ರಮವು ಮಹಿಳಾ ನೌಕರರಿಗೆ ಅನುಕೂಲವಿದೆ ಇದರ ಜೊತೆಗೆ ಕಚೇರಿಗೆ ಬರುವ ಮಹಿಳಾ ತಾಯಂದಿರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Post a Comment

0 Comments