ರಾಣೆಬೆನ್ನೂರು : ರಾಜ್ಯ ಸರ್ಕಾರ ಜೂನ್ 5ರಿಂದ ನದಿಗಳಲ್ಲಿ ಎಲ್ಲ ರೀತಿಯ ಮರಳುಗಾರಿಕೆಯನ್ನು ನಿಷೇಧಿಸಿದ್ದರೂ, ಹಾವೇರಿ ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿರುವುದು ಲೋಕಾಯುಕ್ತ ಪೊಲೀಸರ ದಾಳಿಯಿಂದ ಬಹಿರಂಗವಾಗಿದೆ. ದೂರುಗಳ ಆಧಾರದ ಮೇಲೆ ರಾಣೆಬೆನ್ನೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 17,779 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಸಿ. ಮಧುಸೂದನ್ ನೇತೃತ್ವದಲ್ಲಿ, ಎಸ್‌ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಎಂಟು ಸ್ಥಳಗಳಲ್ಲಿ ಕಾರ್ಯಾಚರಣೆ: ತುಂಗಭದ್ರಾ ನದಿ ಪಾತ್ರದ ನಿಟಪಳ್ಳಿ, ಚಂದಾಪುರ, ಬೇಲೂರು, ಐರಣಿ, ಹರನಗಿರಿ, ಕೋಟಿಹಾಳ, ಚಿಕ್ಕಕುರುವತ್ತಿ ಸೇರಿದಂತೆ ಎಂಟು ಕಡೆಗಳಲ್ಲಿ ದಾಳಿ ನಡೆಸಿ ಅಕ್ರಮ ಮರಳು ಸಂಗ್ರಹವನ್ನು ಪತ್ತೆಹಚ್ಚಲಾಯಿತು. ಸ್ಥಳದಲ್ಲಿದ್ದ 2 ಜೆಸಿಬಿ ಯಂತ್ರಗಳು ಮತ್ತು 4 ತೆಪ್ಪಗಳನ್ನು ಸಹ ಜಪ್ತಿ ಮಾಡಲಾಗಿದೆ.
ನದಿ ರಕ್ಷಣೆಗೆ ಮರಳುಗಾರಿಕೆ ನಿಷೇಧ: ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುವ ಕಾರಣ, ನದಿ ಸಂರಕ್ಷಣೆ ದೃಷ್ಟಿಯಿಂದ ರಾಜ್ಯ ಸರ್ಕಾರ ಮರಳುಗಾರಿಕೆಯನ್ನು ನಿಷೇಧಿಸಿದೆ. ಆದರೂ ಜಿಲ್ಲೆಯ ಹಲವು ಭಾಗಗಳಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ಕಂಡುಬಂದಿದ್ದು, ಇದರ ವಿರುದ್ಧ ನಿರಂತರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಗಸ್ತು ಸಿಬ್ಬಂದಿ ವಿರುದ್ಧವೂ ಆರೋಪ: ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ಎಲ್ಲ ಇಲಾಖೆಗಳಿಗೂ ಮಾಹಿತಿ ಇದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಮರಳುಗಾರಿಕೆ ತಡೆಯಲು ನಿಯೋಜಿಸಿರುವ ಕೆಲ ಗಸ್ತು ಸಿಬ್ಬಂದಿಯೇ ಮರಳು ಕಳ್ಳರೊಂದಿಗೆ ಶಾಮೀಲಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಅಕ್ರಮ ಮರಳುಗಾರಿಕೆಯಿಂದ ನದಿ ಹಾಳಾಗುತ್ತಿದ್ದು, ಗ್ರಾಮಗಳ ಪರಿಸರ ಮತ್ತು ಕೃಷಿ ಭೂಮಿಗೆ ಹಾನಿಯಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಬೆದರಿಕೆ ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಜಕೀಯ ಒತ್ತಡದ ಆರೋಪ: ಕೆಲ ರಾಜಕಾರಣಿಗಳು ಅಕ್ರಮ ಮರಳುಗಾರರಿಗೆ ರಕ್ಷಣೆ ನೀಡುತ್ತಿರುವ ಕಾರಣ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಅಡಚಣೆ ಉಂಟಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಜರುಗಿಸದಂತೆ ಒತ್ತಡಗಳು ಬರುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.
ನಿರಂತರ ದಾಳಿಗೆ ಸಾರ್ವಜನಿಕರ ಒತ್ತಾಯ: ಲೋಕಾಯುಕ್ತರ ಕಾರ್ಯಾಚರಣೆಯನ್ನು ಸ್ಥಳೀಯರು ಸ್ವಾಗತಿಸಿದ್ದು, ತುಂಗಭದ್ರಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಇಂತಹ ದಾಳಿಗಳು ನಿರಂತರವಾಗಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಹಲವರ ವಿರುದ್ಧ ಎಫ್‌ಐಆರ್: ಅಕ್ರಮ ಮರಳು ಸಂಗ್ರಹ ಆರೋಪದಡಿ ಚಿಕ್ಕಕುರುವತ್ತಿಯ ನಿಂಗಪ್ಪ ಹನುಮಂತಪ್ಪ ಹೊನ್ನತ್ತೆಪ್ಪನವರ, ಗಣೇಶ ಅಶೋಕ ಬಾರ್ಕಿ, ಪ್ರಜ್ವಲ್ ಮಲಕಪ್ಪ ಚನ್ನಗೌಡ್ರ, ವಿನಾಯಕ ಕರಿಬಸಪ್ಪ ಬಾರ್ಕಿ, ಸುರೇಶ ನಾಗಪ್ಪ ಬಾರ್ಕಿ, ಶಿವು ಹನುಮಂತಪ್ಪ ರಾಮಣ್ಣನವರ, ಹುಚ್ಚಪ್ಪ ನಾಗಪ್ಪ ಹೊನ್ನತ್ತಿ, ವಿವೇಕ ಮಾಂತೇಶಪ್ಪ ಕಲ್ಲಮ್ಮನವರ, ಪ್ರಕಾಶ ನಾಗಪ್ಪ ರಾಮಣ್ಣನವರ, ಕರಬಸಪ್ಪ ನಾಗಪ್ಪ ಕಲ್ಲಮ್ಮನವರ, ಹರನಗಿರಿಯ ಇರ್ಫಾನ್ ಮಹ್ಮದ್ ಶರೀಪ್ ಚಾಕ್ತಿ, ಕೋಟಿಹಾಳದ ವಿರುಪಾಕ್ಷಪ್ಪ ಬಸಪ್ಪ ಕೋರೇರ, ಹೂವಿನ ಹಡಗಲಿ ತಾಲ್ಲೂಕಿನ ಲಿಂಗನಾಯಕನಹಳ್ಳಿಯ ರುದ್ರೇಶ ತಿಪ್ಪೇಶಪ್ಪ ತೋರಣಗಟ್ಟಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರು ಹೇಳಿದರು.
0 Comments