"ರಾತ್ರಿ ಟಿಪ್ಪರ್‌ಗಳ ಅಬ್ಬರ... ಹಗಲು ಅಧಿಕಾರಿಗಳ ಮೌನ...! ರಾಣೆಬೆನ್ನೂರಿನಲ್ಲಿ ಮಣ್ಣಿನ ಮಾಫಿಯಾ ರಾಜಾರೋಷ!"

ಮಂದಾರ ಜ್ವಾಲೆ: ರಾಣೆಬೆನ್ನೂರು: ಉತ್ತರ ಕರ್ನಾಟಕದ ಹೆಬ್ಬಾಗಿಲು, ಯಾಲಕ್ಕಿ ನಗರ ಖ್ಯಾತಿಯ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಹಾಗೂ ಕುಮಾರ ಪಟ್ಟಣಂ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಮತ್ತು ಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿರುವ ಆರೋಪಗಳು ಕೇಳಿಬಂದಿವೆ. ಸರ್ಕಾರಕ್ಕೆ ಸಲ್ಲಬೇಕಾದ ರಾಜಧನ (ರಾಯಲ್ಟಿ) ಪಾವತಿಸದೆ, ಯಾವುದೇ ಅಧಿಕೃತ ಅನುಮತಿ ಪಡೆಯದೆ ಕೃಷಿ ಪಲವತ್ತಾದ ಜಮೀನುಗಳ ಮೇಲ್ಮಣ್ಣನ್ನು ಹಾಗೂ ತುಂಗಭದ್ರಾ ನದಿ ದಡದ ಮರಳು ಮಿಶ್ರಿತ ಮಣ್ಣನ್ನು ಟಿಪ್ಪರ್ ಲಾರಿಗಳ ಮೂಲಕ ರಾತ್ರಿ ವೇಳೆ ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ಈ ಚಟುವಟಿಕೆ ಮತ್ತಷ್ಟು ವೇಗ ಪಡೆದಿದ್ದು, ಪ್ರತಿದಿನ ಸಂಜೆ ಕತ್ತಲಾಗುತ್ತಿದ್ದಂತೆ ಆರಂಭವಾಗುವ ಅಕ್ರಮ ಸಾಗಾಟ ಮಧ್ಯರಾತ್ರಿ ದಾಟಿ ಬೆಳಗಿನ ಜಾವ 5ರಿಂದ 6 ಗಂಟೆಯವರೆಗೂ ನಿರಂತರವಾಗಿ ನಡೆಯುತ್ತಿದೆ ಎನ್ನಲಾಗಿದೆ. ಪ್ರಮುಖ ರಸ್ತೆಗಳಲ್ಲೇ ಟಿಪ್ಪರ್ ಲಾರಿಗಳು ಓಡಾಡುತ್ತಿದ್ದರೂ, ಅದನ್ನು ತಡೆಯಬೇಕಾದ ಇಲಾಖೆಗಳು ಮಾತ್ರ ಮೌನವಾಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಕುರಿತು ಮಂದಾರ ಜ್ವಾಲೆ ಪ್ರತಿನಿಧಿ ಹಾವೇರಿ ಜಿಲ್ಲಾ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದಾಗ, ಸಮರ್ಪಕ ಉತ್ತರ ದೊರೆಯಲಿಲ್ಲ ಎನ್ನಲಾಗಿದೆ. ಕ್ರಮ ಕೈಗೊಳ್ಳುವ ಬದಲು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವೇ ಹೆಚ್ಚು ಕಂಡುಬಂದಿದೆ ಎಂಬ ಆರೋಪವೂ ಕೇಳಿಬಂದಿದೆ. ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಸಾರ್ವಜನಿಕರಿಗೆ ಉತ್ತರಿಸುವ ಹೊಣೆಗಾರಿಕೆಯನ್ನು ಮರೆತಿರುವಂತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಇಲಾಖೆಗಳ ಕೆಲಸ ಏನು?

ಭೂ ಮತ್ತು ಗಣಿ ಇಲಾಖೆಯ ಮೂಲ ಕರ್ತವ್ಯ ಅಕ್ರಮ ಮಣ್ಣು, ಮರಳು ಹಾಗೂ ಕಲ್ಲು ಗಣಿಗಾರಿಕೆಯನ್ನು ತಡೆಯುವುದು, ಸಾಗಾಣಿಕೆಯನ್ನು ನಿಯಂತ್ರಿಸುವುದು ಮತ್ತು ಸರ್ಕಾರದ ರಾಜಸ್ವವನ್ನು ರಕ್ಷಿಸುವುದು. ಆದರೆ ಹಲಗೇರಿ ಮತ್ತು ಕುಮಾರ ಪಟ್ಟಣಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ, ಇಲಾಖೆ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ರೈತರ ಜಮೀನಿನ ಫಲವತ್ತಾದ ಮಣ್ಣು ದೋಚಾಟ

ಸಾರ್ವಜನಿಕರ ಆರೋಪದ ಪ್ರಕಾರ, ಕೆಲ ರೈತರಿಗೆ ಹಣದ ಆಮಿಷವೊಡ್ಡಿ ಅವರ ಕೃಷಿ ಭೂಮಿಯ ಮೇಲ್ಭಾಗದ ಫಲವತ್ತಾದ ಮಣ್ಣನ್ನು ತೆಗೆದು ಸಾಗಿಸಲಾಗುತ್ತಿದೆ. ಇದೇ ಮಣ್ಣು ಬೆಳೆಗಳಿಗೆ ಜೀವಾಳ. ಅದನ್ನು ತೆಗೆದರೆ ಭೂಮಿಯ ಉತ್ಪಾದಕತೆ ಕುಸಿಯುವ ಅಪಾಯವಿದೆ. ಕ್ಷಣಿಕ ಲಾಭಕ್ಕಾಗಿ ರೈತರು ಮತ್ತು ಕೃಷಿಯ ಭವಿಷ್ಯವೇ ಅಪಾಯಕ್ಕೆ ಸಿಲುಕುತ್ತಿದೆ.
ತುಂಗಭದ್ರಾ ದಡಕ್ಕೂ ಕನ್ನ

ಕೃಷಿ ಭೂಮಿಯಷ್ಟೇ ಅಲ್ಲ, ತುಂಗಭದ್ರಾ ನದಿ ದಡದಲ್ಲಿರುವ ಮರಳು ಮಿಶ್ರಿತ ಮಣ್ಣನ್ನೂ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪರಿಸರ ನಿಯಮಗಳನ್ನು ಉಲ್ಲಂಘಿಸಿ ನಡೆಯುವ ಇಂತಹ ಗಣಿಗಾರಿಕೆ ಭೂ ಕುಸಿತ, ಜಲಮಟ್ಟ ಕುಸಿತ ಹಾಗೂ ಪರಿಸರ ಹಾನಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಪೊಲೀಸರು-ಗಣಿ ಇಲಾಖೆ ಜವಾಬ್ದಾರಿ ತಳ್ಳಾಟ?

ಈ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ "ಭೂ ಮತ್ತು ಗಣಿ ಇಲಾಖೆಗೆ ತಿಳಿಸಿ" ಎಂಬ ಉತ್ತರ ಸಿಗುತ್ತಿದೆ ಎನ್ನಲಾಗಿದೆ. ಮತ್ತೊಂದೆಡೆ, ಭೂ ಮತ್ತು ಗಣಿ ಇಲಾಖೆಯನ್ನು ಸಂಪರ್ಕಿಸಿದರೆ "ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸುತ್ತೇವೆ" ಎಂದು ಹೇಳಲಾಗುತ್ತಿದೆ. ಹೀಗಾದರೆ ಅಕ್ರಮ ಗಣಿಗಾರಿಕೆಯನ್ನು ತಡೆಯುವ ಹೊಣೆಗಾರಿಕೆ ಯಾರದು? ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.

ಟಾಸ್ಕ್ ಫೋರ್ಸ್ ಕೇವಲ ಹೆಸರಿಗಷ್ಟೇ?

ಅಕ್ರಮ ಗಣಿಗಾರಿಕೆ ತಡೆಯಲು ರಚಿಸಲಾದ ಟಾಸ್ಕ್ ಫೋರ್ಸ್ ಸಮಿತಿ ಎಲ್ಲಿದೆ? ರಾತ್ರಿ ವೇಳೆ ನೂರಾರು ಲೋಡ್‌ಗಳ ಮಣ್ಣು ಸಾಗಾಣಿಕೆ ನಡೆಯುತ್ತಿರುವಾಗ ಸಮಿತಿಯ ಸದಸ್ಯರು ಏನು ಮಾಡುತ್ತಿದ್ದಾರೆ? ದಂಧೆ ನಡೆಯುವಾಗ ಮೌನವಾಗಿದ್ದು, ನಂತರ ಒಂದು-ಎರಡು ಪ್ರಕರಣ ದಾಖಲಿಸಿ ಕರ್ತವ್ಯ ಮುಗಿದಂತೆ ವರ್ತಿಸುವುದು ಯಾರ ಹಿತಾಸಕ್ತಿಗಾಗಿ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿಬರುತ್ತಿವೆ.

ಕೆಲವು ಸಾರ್ವಜನಿಕರು ಈ ಅಕ್ರಮ ದಂಧೆಯ ಹಿಂದೆ ಪ್ರಭಾವಿಗಳ ಬೆಂಬಲ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಇರಬಹುದೆಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಆರೋಪಗಳ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ಇಲಾಖೆಗಳು ಪಾರದರ್ಶಕ ತನಿಖೆಯ ಮೂಲಕ ಸ್ಪಷ್ಟಪಡಿಸಬೇಕಾಗಿದೆ.
ಮಂದಾರ ಜ್ವಾಲೆಯ ನೇರ ಪ್ರಶ್ನೆಗಳು

- ಪ್ರತಿದಿನ ರಾತ್ರಿ ನಡೆಯುವ ಅಕ್ರಮ ಮಣ್ಣು ಸಾಗಾಟ ಅಧಿಕಾರಿಗಳ ಕಣ್ಣಿಗೆ ಬೀಳುತ್ತಿಲ್ಲವೇ?
- ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ರಾಜಸ್ವ ನಷ್ಟ ಉಂಟಾಗುತ್ತಿದ್ದರೂ ಕ್ರಮ ಏಕೆ ಇಲ್ಲ?
- ಟಾಸ್ಕ್ ಫೋರ್ಸ್ ಸಮಿತಿ ಸಭೆಗಳಿಗೆ ಮಾತ್ರ ಸೀಮಿತವಾಗಿದೆಯೇ?
- ಪೊಲೀಸ್, ಕಂದಾಯ ಮತ್ತು ಗಣಿ ಇಲಾಖೆ ಪರಸ್ಪರ ಜವಾಬ್ದಾರಿ ತಳ್ಳಿಕೊಳ್ಳುವುದು ಏಕೆ?
- ಈ ಅಕ್ರಮ ದಂಧೆಗೆ ಬೆಂಬಲ ನೀಡುತ್ತಿರುವವರು ಯಾರು?
- ಅಕ್ರಮ ಸಾಗಾಟದಲ್ಲಿ ತೊಡಗಿರುವ ಟಿಪ್ಪರ್ ಲಾರಿಗಳ ವಿರುದ್ಧ ಇದುವರೆಗೆ ಎಷ್ಟು ಪ್ರಕರಣ ದಾಖಲಾಗಿವೆ?

ಮಂದಾರ ಜ್ವಾಲೆಯ ಆಗ್ರಹ

ಹಾವೇರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಭೂ ಮತ್ತು ಗಣಿ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ವಿಶೇಷ ಕಾರ್ಯಾಚರಣೆ ನಡೆಸಬೇಕು. ಹಲಗೇರಿ, ಕುಮಾರಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಾತ್ರಿ ವೇಳೆ ಜಂಟಿ ದಾಳಿ ನಡೆಸಿ ಅಕ್ರಮ ಮಣ್ಣು ಸಾಗಾಣಿಕೆಯನ್ನು ತಡೆಗಟ್ಟಬೇಕು. ಟಾಸ್ಕ್ ಫೋರ್ಸ್ ಸಮಿತಿಯ ಕಾರ್ಯವೈಖರಿಯ ಬಗ್ಗೆ ತನಿಖೆ ನಡೆಸಬೇಕು. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರದ ರಾಜಸ್ವ ಹಾಗೂ ರೈತರ ಭೂಮಿಯನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಇಲಾಖೆಗಳು ತಕ್ಷಣ ನಿರ್ವಹಿಸಬೇಕು.

ಮಣ್ಣಿನ ದೋಚಾಟ ನಿಲ್ಲದಿದ್ದರೆ ನಾಳೆ ಉಳಿಯುವುದು ಬರಿದಾದ ಭೂಮಿ, ಖಾಲಿ ಖಜಾನೆ ಮತ್ತು ಪರಿಸರದ ವಿನಾಶ ಮಾತ್ರ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Post a Comment

0 Comments